ಸಿಂಹದ ಜತೆ ಕಾದಾಡಿ ತನ್ನ ಕಂದಮ್ಮನನ್ನು ರಕ್ಷಿಸಿದ ಮಹಾತಾಯಿ

ಸಿಂಹದ ಜತೆ ಕಾದಾಡಿ ತನ್ನ ಕಂದಮ್ಮನನ್ನು ರಕ್ಷಿಸಿದ ಮಹಾತಾಯಿ

Jun 20, 2016 06:27:09 PM (IST)

ಡೆನ್ವರ್: ಸಿಂಹದ ಬಾಯಲ್ಲಿ ಸಿಲುಕಿ ನರಳಾಡುತ್ತಿದ್ದ ತನ್ನ ಮಗುವನ್ನು ರಕ್ಷಿಸಲು ತಾಯಿಯೊಬ್ಬಳು ಸಿಂಹದ ಜತೆ ಕಾದಾಡಿ ಮಗುವನ್ನು ರಕ್ಷಿಸಿದ ಘಟನೆ ಪಶ್ಚಿಮ ಅಮೆರಿಕದ ಕೊಲೊರಾಡೊ ರಾಜ್ಯದಲ್ಲಿ ನಡೆದಿದೆ.

ರೆಸಾರ್ಟ್ ನ ಹೊರಭಾಗದಲ್ಲಿ ತನ್ನ ಸಹೋದರನೊಂದಿಗೆ ಆಟವಾಡುತ್ತಿದ್ದ ಮಗುವಿನ ಬಳಿ ಪರ್ವತ ಸಿಂಹವೊಂದು ಬಂದಿದೆ. ಸಿಂಹವನ್ನು ನೋಡುತ್ತಿದ್ದಂತೆ ಸಹೋದರ ತಮ್ಮನನ್ನು ಬಿಟ್ಟು ಓಡಿಹೋಗಿದ್ದಾನೆ. ಕೂಡಲೇ ಸಿಂಹ ಮಗುವಿನ ತಲೆಗೆ ಬಾಯಿ ಹಾಕಿದೆ. ಕ್ಷಣಾರ್ಧದಲ್ಲಿ ಮಗುವಿನ ಚೀರಾಟವನ್ನು ಕೇಳಿಸಿಕೊಂಡ ತಾಯಿ ಹೊರ ಬಂದು ನೋಡಿದಾಗ ಸಿಂಹದ ಬಾಯಲ್ಲಿ ತನ್ನ ಮಗುವಿನ ತಲೆ ಇರುವುದನ್ನು ನೋಡಿ ಗಾಬರಿಯಾಗಿದ್ದಾಳೆ. ಕೂಡಲೇ ಜೀವ ಭಯವನ್ನು ಬಿಟ್ಟು ಸಿಂಹದೊಂದಿಗೆ ಕಾದಾಡಲು ಮುಂದಾಗಿದ್ದಾಳೆ. ಈ ವೇಳೆ ಮಗುವನ್ನು ರಕ್ಷಿಸುವ ಸಲುವಾಗಿ ಸಿಂಹ ಬಾಯಿಯನ್ನು ಹಿಡಿದು ತನ್ನ ಬಲಗೈಯನ್ನು ಅದರ ಬಾಯಿಗೆ ಹಾಕಿ ಮಗುವನ್ನು ಬಿಡಿಸಿಕೊಳ್ಳಲು ಯತ್ನಿಸಿದ್ದಾಳೆ. ಇದರಂತೆ ಮಗುವನ್ನು ಬಿಟ್ಟ ಸಿಂಹ ತಾಯಿಯ ಕೈಯನ್ನು ಗಾಯ ಮಾಡಿ, ನಂತರ ಹೆದರಿ ಓಡಿಹೋಗಿದೆ.

ನನ್ನ ಪ್ರಾಣಕ್ಕಿಂತ ಮಗು ನನಗೆ ಮುಖ್ಯವಾಗಿತ್ತು. ತನ್ನ ಮಗುವಿನ ತಲೆ ಸಿಂಹದ ಬಾಯಿಯಲ್ಲಿದ್ದನ್ನು ಕಂಡು ಭಯವನ್ನು ಬಿಟ್ಟು ರಕ್ಷಿಸಲು ಮುಂದಾದೆ. ಮಗುವನ್ನು ಬಿಡಿಸುವ ಸಂದರ್ಭ ನನ್ನ ಬಲಗೈಗೆ ಗಾಯ ಮಾಡಿ ಸಿಂಹ ಓಡಿ ಹೋಯಿತು ಎಂದು ಮಗುವಿನ ತಾಯಿ ಹೇಳಿಕೊಂಡಿದ್ದಾರೆ.