ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ನಿರ್ಮಿಸಲಾಗಿದ್ದ ಮತ್ತೂಂದು ಸುರಂಗವನ್ನು ಶನಿವಾರ ಗಡಿ ಭದ್ರತಾ ಪಡೆ(ಬಿಎಸ್ಎಫ್) ಪತ್ತೆಹಚ್ಚಿದೆ.
ಈ ಮೂಲಕ ಉಗ್ರರ ಒಳನುಸುಳುವಿಕೆಗೆ ಪಾಕಿಸ್ತಾನವು ಗಡಿಯಲ್ಲಿ ತನ್ನ ಕುತಂತ್ರವನ್ನು ಮುಂದುವರಿಸಿದ್ದು, ಇದು ಕಳೆದ 10 ದಿನಗಳಲ್ಲಿ ಪತ್ತೆಯಾಗುತ್ತಿರುವ 2ನೇ ಸುರಂಗವಾಗಿದೆ. ಹಾಗೆಯೇ ಈವರೆಗೂ ಒಟ್ಟಾರೆ 4 ಸುರಂಗಗಳು ಕಳೆದ 6 ತಿಂಗಳಲ್ಲಿ ಪತ್ತೆಯಾಗಿದೆ.
150 ಮೀಟರ್ ಉದ್ದ ಮತ್ತು 30 ಅಡಿ ಆಳವಿದ್ದು, 3 ಅಡಿಗಳಷ್ಟು ಅಗಲವಿರುವ ಈ ಸುರಂಗ, ಹಿರಾನಗರ ವಲಯದ ಪನ್ಸಾರ್ ಪ್ರದೇಶದ ಗಡಿ ಠಾಣೆಯಲ್ಲಿ ಸುರಂಗ ನಿಗ್ರಹ ಕಾರ್ಯಾಚರಣೆ ವೇಳೆ ಬಿಎಸ್ಎಫ್ನ ಕಣ್ಣಿಗೆ ಬಿದ್ದಿದೆ.
ಇಷ್ಟೇ ಅಲ್ಲದೆ, ಗುಪ್ತಚರ ಮಾಹಿತಿಯ ಆಧಾರದಲ್ಲಿ ಯೋಧರು ಪೂಂಛ್ ಜಿಲ್ಲೆಯಲ್ಲಿ ಶನಿವಾರ ಉಗ್ರರ ಅಡಗುತಾಣವೊಂದನ್ನು ಬಿಎಸ್ಎಫ್ ಯೋಧರು ಪತ್ತೆಹಚ್ಚಿದ್ದು, ಒಂದು ಎಕೆ 47 ರೈಫಲ್, 3 ಮ್ಯಾಗಜಿನ್, 82 ರೌಂಡ್ಸ್, ಮೂರು ಚೈನೀಸ್ ಪಿಸ್ತೂಲುಗಳು, ನಾಲ್ಕು ಹ್ಯಾಂಡ್ ಗ್ರೆನೇಡ್ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.