ಮಲ್ಯ ಸಾಲದ ಜಾಮೀನುದಾರ ಪಟ್ಟ ರೈತನ ತಲೆಗೆ

ಮಲ್ಯ ಸಾಲದ ಜಾಮೀನುದಾರ ಪಟ್ಟ ರೈತನ ತಲೆಗೆ

May 21, 2016 03:17:11 PM (IST)

ಹೊಸದಿಲ್ಲಿ: ಕೋಟಿಗಟ್ಟಲೆ ಸಾಲ ಮಾಡಿ ವಿದೇಶದಲ್ಲಿ ಐಶಾರಾಮಿ ಜೀವನ ಸಾಗಿಸುತ್ತಿರುವ ಉದ್ಯಮಿ ವಿಜಯ್ ಮಲ್ಯನ ಸಾಲಕ್ಕೆ ಜಾಮೀನುದಾರನ ಪಟ್ಟ ಇದೀಗ ಸಣ್ಣ ರೈತನ ಮೇಲೆ ಬಿದ್ದಿದೆ.

ವಿಜಯ್ ಮಲ್ಯ ಮಾಡಿರುವ ಸಾಲಕ್ಕೆ ಉತ್ತರಪ್ರದೇಶದ ಫಿಲಿಬಿಟ್ ಜಿಲ್ಲೆಯ ಖಜುರಿಯಾ ನವಿರಾಮ್ ಹಳ್ಳಿಯ ರೈತ ಮನಮೋಹನ್ ಸಿಂಗ್ ಜಾಮೀನು ನೀಡಿದ್ದಾನೆ ಎಂದು ಆರೋಪಿಸಿ ಬ್ಯಾಂಕ್  ಅಧಿಕಾರಿಗಳು ಮತ್ತು ಪೊಲೀಸರು ಆತನಿಗೆ ಇದೀಗ ನೋಟಿ ಜಾರಿ ಮಾಡಿದ್ದಾರೆ. ಕೇವಲ ನೋಟಿಸ್ ನೀಡಿದ್ದಷ್ಟೇ ಅಲ್ಲದೇ ರೈತನ ಬ್ಯಾಂಕ್ ಖಾತೆಯನ್ನು ರದ್ದು ಮಾಡಲಾಗಿದ್ದು, ಕೇಂದ್ರ  ಸರ್ಕಾರದಿಂದ ಆತನಿಗೆ ದೊರೆಯುತ್ತಿದ್ದ ಎಲ್ಲ ಸೌಲಭ್ಯಗಳಿಗೂ ಕತ್ತರಿ ಹಾಕಲಾಗಿದೆಯಂತೆ ಈ ವಿಚಾರವನ್ನು ಸ್ವತಃ ರೈತ ಮನಮೋಹನ್ ಸಿಂಗ್ ಹೇಳಿಕೊಂಡಿದ್ದು, ಯಾರೋ ಮಾಡಿದ  ಫೋರ್ಜರಿ ಸಹಿಗೆ ಇದೀಗ ರೈತ ಮನಮೋಹನ್ ಸಿಂಗ್ ನ ಬದುಕು ಬರ್ಬಾದ್ ಆಗಿದೆ.

ರೈತ ಉತ್ತರ ಪ್ರದೇಶದ ಫಿಲಿಬಿಟ್ ಕ್ಷೇತ್ರದ ಮನಮೋಹನ್ ಸಿಂಗ್​ಗೆ ಈಗ ಬ್ಯಾಂಕ್ ಆಫ್ ಬರೋಡಾ ಸ್ಥಳೀಯ ಶಾಖೆ ನೋಟಿಸ್ ಜಾರಿ ಮಾಡಿದೆ. ಮುಂಬೈ ಶಾಖೆ ಸ್ಥಳೀಯ ಶಾಖೆಯ  ಮ್ಯಾನೇಜರ್​ಗೆ ನಿರ್ದೇಶನ ನೀಡಿದ್ದರ ಹಿನ್ನೆಲೆಯಲ್ಲಿ ಇಷ್ಟೆಲ್ಲಾ ಅವಾಂತರಗಳು ಸೃಷ್ಟಿಯಾಗಿವೆ ಎಂದು ತಿಳಿದುಬಂದಿದೆ. ನೋಟಿಸ್ ಜಾರಿಗೊಳಿಸಿರುವ ಬ್ಯಾಂಕ್, ವಿಜಯ್ ಮಲ್ಯಗೆ ಜಾಮೀನು ನೀಡಿದ ವ್ಯಕ್ತಿ ಎನ್ನುವ ಕಾರಣಕ್ಕಾಗಿ ರೈತನಿಗೆ ಸಿಗಬಹುದಾದ ಎಲ್ಲಾ ಸವಲತ್ತುಗಳನ್ನೂ ನಿಲ್ಲಿಸಿದೆ. ಬೆಳೆಗೆ ಸಿಗಬೇಕಾದ  ಸಬ್ಸಿಡಿ ಸಹ ಇದರಿಂದ ಸ್ಥಗಿತಗೊಂಡಿದೆ. ಇದರಿಂದ ರೈತ ಮನಮೋಹನ್ ಸಿಂಗ್ ಕಂಗಾಲಾಗಿದ್ದು, ಮಾಧ್ಯಮಗಳ ಮುಂದೆ ತಮ್ಮ ನೋವು ತೋಡಿಕೊಂಡಿದ್ದಾರೆ. ಎಂಟು ಎಕರೆ ಜಮೀನು  ಹೊಂದಿರುವ ರೈತ ಮನಮೋಹನ್ ಸಿಂಗ್ ಹೇಳುವ ಪ್ರಕಾರ ಕಳೆದ ಡಿಸೆಂಬರ್​ನಿಂದ ಎಲ್ಲಿಲ್ಲದ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

"ಈ ವಿಜಯ್ ಮಲ್ಯ ಯಾರು ಎನ್ನುವುದೇ ನನಗೆ ಗೊತ್ತಿಲ್ಲ. ಇವೆಲ್ಲವೂ ಹೇಗೆ ನಡೆದಿದೆ, ಇದರ ಹಿಂದೆ ಯಾರಿದ್ದಾರೆ ಎನ್ನುವುದೇನೂ ತಿಳಿದಿಲ್ಲ. ಮಲ್ಯ ಎನ್ನುವ ಹೆಸರಿನವರರು ಯಾರೂ ನನಗೆ  ಪರಿಚಯವಿಲ್ಲ. ನನ್ನ ಜೀವನದಲ್ಲಿಯೇ ಒಮ್ಮೆಯೂ ನಾನು ಮುಂಬೈಗೆ ಭೇಟಿ ನೀಡಿಲ್ಲ. ಹೀಗಿರುವಾಗ ವಿಜಯ್ ಮಲ್ಯ ಎನ್ನುವವರ ಸಾಲಕ್ಕೆ ನಾನು ಹೇಗೆ ಶೂರಿಟಿ ನೀಡಲು ಸಾಧ್ಯ. ಮಲ್ಯ ಅವರ  ಜಾಮೀನುದಾರ ಎಂದು ನನ್ನ ಬ್ಯಾಂಕ್ ಖಾತೆಯನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ ಸರ್ಕಾರದಿಂದ ಸಿಗುವ ಎಲ್ಲಾ ಯೋಜನೆಗಳ ಸವಲತ್ತಿನಿಂದ ನಾನು ವಂಚಿತನಾಗುತ್ತಿದ್ದೇನೆ. ನಾನು  ಬೆಳೆದ ಎಲ್ಲಾ ಬೆಳೆಗಳನ್ನು ಅತಿ ಕಡಿಮೆ ಬೆಲೆಗೆ ಮಾರಿಕೊಳ್ಳುತ್ತಿದ್ದೇನೆ. ಬೆಂಬಲ ಬೆಲೆ, ಸಬ್ಸಿಡಿ ಸವಲತ್ತುಗಳು ನನ್ನ ಪಾಲಿಗೆ ಇಲ್ಲವಾಗಿದೆ. ಸಬ್ಸಿಡಿ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುವ  ಕಾರಣ ಅದೂ ಕೂಡ ನನಗೆ ಲಭ್ಯವಾಗುತ್ತಿಲ್ಲ. ನನ್ನ ಸಹಿಯನ್ನು ಫೋರ್ಜರಿ ಮಾಡಿ ಮೋಸ ಮಾಡಲಾಗಿದೆ ಎಂದು ಮನಮೋಹನ್ ಸಿಂಗ್ ಆರೋಪಿಸಿದ್ದಾರೆ. ಅಲ್ಲದೆ ಈ ಕುರಿತು ಮುಂಬೈ  ಬ್ಯಾಂಕ್ ಶಾಖೆಗೆ ಪತ್ರ ಬರೆದಿರುವುದಾಗಿ ಸಿಂಗ್ ಹೇಳಿಕೊಂಡಿದ್ದಾರೆ. ನಾನು ಬ್ಯಾಂಕಿನಲ್ಲಿ 5ಲಕ್ಷ ರೂಪಾಯಿ ಸಾಲ ಪಡೆದುಕೊಂಡಿರುವೆ. ಈಗ ಹಣ ತೆಗೆದುಕೊಂಡು ಬರಲು ಹೋದಾಗ ಬ್ಯಾಂಕ್‌‌ನಲ್ಲಿ ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದಾರೆ. ನಾನು ಅವರಿಗೆ ಎಷ್ಟು ಬೇಡಿಕೊಂಡರೂ ಅವರು ನನ್ನ ಮಾತು ಕೇಳುತ್ತಿಲ್ಲ ಎಂದು ರೈತ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.