ಸತ್ತ ಮಗನ ವೀರ್ಯಾಣು ಕೋರಿದ ತಂದೆ; ಅರ್ಜಿ ತಿರಸ್ಕರಿಸಿದ ಕೋರ್ಟ್

ಸತ್ತ ಮಗನ ವೀರ್ಯಾಣು ಕೋರಿದ ತಂದೆ; ಅರ್ಜಿ ತಿರಸ್ಕರಿಸಿದ ಕೋರ್ಟ್

MS   ¦    Jan 23, 2021 06:12:31 PM (IST)
ಸತ್ತ ಮಗನ ವೀರ್ಯಾಣು ಕೋರಿದ ತಂದೆ; ಅರ್ಜಿ ತಿರಸ್ಕರಿಸಿದ ಕೋರ್ಟ್

ಕೋಲ್ಕತ್ತಾ: ವ್ಯಕ್ತಿಯು ಸಾಯುವ ಸಂದರ್ಭವಿದ್ದರೆ ಅಥವಾ ಸತ್ತ ನಂತರ ಹೆಂಡತಿಗೆ ಆತನಿಂದ ಮಗುವನ್ನು ಪಡೆಯುವ ಉದ್ದೇಶವಿದ್ದ ಪಕ್ಷದಲ್ಲಿ ಮಾತ್ರ ಆತನ ವೀರ್ಯ ಸಂಗ್ರಹಿಸುವ ಅವಕಾಶವಿದೆ. ಈ ಏಕೈಕ ಹಕ್ಕು ಹೆಂಡತಿಗೆ ಮಾತ್ರ ಮೀಸಲು ಎಂದು ತೀರ್ಪು ನೀಡಿರುವ ಕೊಲ್ಕತ್ತಾ ಹೈಕೋರ್ಟ್.

ತನ್ನ ಮಗ ಸಾವನ್ನಪ್ಪಿದ್ದು, ಆತನ ವೀರ್ಯವನ್ನು ಸಂಗ್ರಹಿಸಲು ತಂದೆಯಾದ ನನಗೆ ಹಕ್ಕಿದ್ದು, ಇದಕ್ಕೆ ಕೋರ್ಟ್ ಅನುಮತಿ ನೀಡಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಕೊಲ್ಕತ್ತಾ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪನ್ನು ನೀಡುವ ಮೂಲಕ ಆ ವ್ಯಕ್ತಿಯ ಅರ್ಜಿಯನ್ನು ತಿರಸ್ಕರಿಸಿದೆ.

ಸತ್ತ ವ್ಯಕ್ತಿಯು ಮದುವೆಯಾದವನಾದ್ದರೆ ಆತನ ವೀರ್ಯವನ್ನು ಪಡೆಯುವ ಹಕ್ಕು ಹೆಂಡತಿಗೆ ಮಾತ್ರ ಇರುತ್ತದೆ. ತಂದೆ-ಮಗನ ಸಂಬಂಧ ಈ ಹಕ್ಕಿಗೆ ಒಳಪಡುವುದಿಲ್ಲ. ಹಾಗೆಯೇ ಇಂಥ ಅರ್ಜಿಗಳಿಗೆ ಉತ್ತೇಜನ ನೀಡುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಅರ್ಜಿಯನ್ನು ನಿರಾಕರಿಸಿದ ಕೋರ್ಟ್, ಅರ್ಜಿದಾರರಿಗೆ ತನ್ನ ಸತ್ತ ಮಗನ ವೀರ್ಯವನ್ನು ಪಡೆಯುವ ಯಾವುದೇ ಮೂಲ ಹಕ್ಕು ಇಲ್ಲ ಎಂದು ತಿಳಿಸಿದೆ. ತಂದೆ-ಮಗನ ಸಂಬಂಧವಿದ್ದರೂ, ಮಗನ ಸಂತತಿಗೆ ಸಂಬಂಧಿಸಿದಂತೆ ತಂದೆಗೆ ಹಕ್ಕು ಇರುವುದಿಲ್ಲ ಎಂದು ನ್ಯಾಯಮೂರ್ತಿ ಭಟ್ಟಾಚಾರ್ಯ ತಿಳಿಸಿದ್ದಾರೆ. ತಮಗೆ, ಮಗನ ವೀರ್ಯ ಸಂಗ್ರಹಿಸಲು, ನಿರಪೇಕ್ಷಣಾ ಪತ್ರ ನೀಡುವಂತೆ ಸೊಸೆಗೆ ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಆ ವ್ಯಕ್ತಿಯು ಕೋರಿದ್ದು, ಈ ಮನವಿಯನ್ನೂ ಕೋರ್ಟ್ ತಿರಸ್ಕರಿಸಿದೆ. ಈ ವಿಷಯ ರಿಟ್ ನ್ಯಾಯಾಲಯದ ವ್ಯಾಪ್ತಿಗೆ ಮೀರಿದೆ ಎಂದು ತಿಳಿಸಿದೆ.