ಗಾಂಧೀಜಿ ಭಂಗಿಯಲ್ಲೇ ಖಾದಿ ನೇಯುತ್ತಿರುವ ಪ್ರಧಾನಿ ಭಾವಚಿತ್ರ: ಕ್ಯಾಲೆಂಡರ್ ನೋಡಿ ನೌಕರರಿಗೆ ಶಾಕ್ !

ಗಾಂಧೀಜಿ ಭಂಗಿಯಲ್ಲೇ ಖಾದಿ ನೇಯುತ್ತಿರುವ ಪ್ರಧಾನಿ ಭಾವಚಿತ್ರ: ಕ್ಯಾಲೆಂಡರ್ ನೋಡಿ ನೌಕರರಿಗೆ ಶಾಕ್ !

Jan 13, 2017 02:49:09 PM (IST)

ಮುಂಬೈ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಚಿತ್ರದ ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಖಾದಿ ಗ್ರಾಮೋದ್ಯೋಗ ಆಯೋಗದ ಗೋಡೆ ಕ್ಯಾಲೆಂಡರ್‌ ಹಾಗೂ ಟೇಬಲ್‌ ಡೈರಿಯಲ್ಲಿ ಮುದ್ರಿಸಲಾಗಿದೆ.

ನರೇಂದ್ರ ಮೋದಿ ಅವರು ದೊಡ್ಡ ಚರಕವೊಂದರಲ್ಲಿ ಗಾಂಧೀಜಿ ಅವರ ಭಂಗಿಯಲ್ಲೇ ಕುಳಿತುಕೊಂಡು ಖಾದಿ ನೇಯುತ್ತಿರುವ ಭಾವಚಿತ್ರ ಟೇಬಲ್‌ ಡೈರಿ ಹಾಗೂ ಕ್ಯಾಲೆಂಡರ್‌ ಮುಖಪುಟದಲ್ಲಿ ಪ್ರಕಟಿಸಲಾಗಿದ್ದು, ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಗ್ರಾಮೋದ್ಯೋಗ ಆಯೋಗದ ಸಿಬ್ಬಂದಿ ಕ್ಯಾಲೆಂಡರ್‌ ಹಾಗೂ ಡೈರಿಯಲ್ಲಿ ಗಾಂಧೀಜಿ ಭಾವಚಿತ್ರವನ್ನು ಮಾತ್ರವೇ ನೋಡಿದ್ದು, ಈ ಬಾರಿ ಹೊಸ ಬೆಳವಣಿಗೆಯಿಂದ ವಿಸ್ಮಿತರಾಗಿದ್ದಾರೆ. ಮಾತ್ರವಲ್ಲ ಕೇಂದ್ರ ಕಚೇರಿಯಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಹಿರಿಯ ಉದ್ಯೋಗಿಯೊಬ್ಬರ ಪ್ರಕಾರ, ಮೋದಿ ಅವರ ಭಾವಚಿತ್ರವನ್ನು ಕಳೆದ ಬಾರಿ ಕ್ಯಾಲೆಂಡರ್‌ನಲ್ಲಿ ಸೇರಿಸಲಾಗಿತ್ತು. ಆದರೆ ಈ ಬಾರಿ ಗಾಂಧೀಜಿ ಅವರ ಫೋಟೋವನ್ನು ಸಂಪೂರ್ಣವಾಗಿ ತೆಗೆಯಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗ್ರಾಮೋದ್ಯೋಗ ಆಯೋಗದ ವಿನಯ್‌ ಕುಮಾರ್‌ ಸಕ್ಸೇನಾ ಅವರು ಹೇಳುವ ಪ್ರಕಾರ ಈ ಹಿಂದೆ ಕೂಡ ಫೋಟೋ ಬದಲಿಸಿದ ನಿದರ್ಶನಗಳಿದ್ದು, ಇದರಲ್ಲಿ ವಿಶೇಷವೇನೂ ಇಲ್ಲ. ಮೋದಿ ಅವರು ಹಿಂದಿನಿಂದಲೂ ಖಾದಿ ವಸ್ತ್ರ ಧರಿಸುತ್ತಿದ್ದು, ಜನಮಾನಸದಲ್ಲಿ ಖಾದಿಯನ್ನು ಜನಪ್ರಿಯಗೊಳಿಸಿದ್ದಾರೆ ಎಂದಿದ್ದಾರೆ.