ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ ತೀರ್ಪು ಪ್ರಕಟ: 24 ಮಂದಿಯ ಆರೋಪ ಸಾಬೀತು

ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ ತೀರ್ಪು ಪ್ರಕಟ: 24 ಮಂದಿಯ ಆರೋಪ ಸಾಬೀತು

Jun 02, 2016 07:20:33 PM (IST)

ಅಹ್ಮದಾಬಾದ್: 2002ರ ಗುಜರಾತ್ ಹಿಂಸಾಚಾರ ವೇಳೆ 69 ಮಂದಿಯ ಧಾರುಣ ಸಾವಿಗೆ ಕಾರಣವಾಗಿದ್ದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ ತೀರ್ಪು ಗುರುವಾರ ಪ್ರಕಟವಾಗಿದ್ದು, 66 ಬಂಧಿತರಲ್ಲಿ 24 ಮಂದಿಯ ಆರೋಪ ಸಾಬೀತಾಗಿದೆ ಎಂದು ಅಹ್ಮದಾಬಾದ್ ವಿಶೇಷ ನ್ಯಾಯಾಲಯದ ಹೇಳಿದೆ.

2002ರಲ್ಲಿ ನಡೆದ ಗೋದ್ರಾ ಹತ್ಯಾಕಾಂಡಕ್ಕೆ ಪ್ರತಿಯಾಗಿ ನಡೆದ ಗೋದ್ರೋತ್ತರ ಹತ್ಯಾಕಾಂಡಗಳಲ್ಲಿ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಮುಖ ಪ್ರಕರಣವಾಗಿದೆ. ಈ ಹತ್ಯಾಕಾಂಡದಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ ಸುಮಾರು  69 ಮಂದಿಯನ್ನು ಧಾರುಣವಾಗಿ ಕೊಲ್ಲಲಾಗಿತ್ತು. ಈವರೆಗೂ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನಾಲ್ಕು ಮಂದಿ ನ್ಯಾಯಾಧೀಶರ ಬದಲಾವಣೆಯಾಗಿದ್ದು, ಇಂದು ತೀರ್ಪು ನೀಡಿರುವ ನ್ಯಾ. ಪಿಬಿ ದೇಸಾಯಿ 5ನೇ ನ್ಯಾಯಾಧೀಶರಾಗಿದ್ದಾರೆ.

ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 36 ಜನರನ್ನು ಖುಲಾಸೆ ಗೊಳಿಸಲಾಗಿದ್ದು, 11 ಆರೋಪಿಗಳ ವಿರುದ್ಧದ ಕೊಲೆ ಆರೋಪ ಸಾಬೀತಾಗಿದೆ. ಉಳಿದ 13 ಆರೋಪಿಗಳ  ವಿರುದ್ಧ ಇತರೆ ಆರೋಪಗಳು ಸಾಬೀತಾಗಿದ್ದು, ಎಲ್ಲ ಆರೋಪಿಗಳಿಗೂ ಮುಂದಿನ ಸೋಮವಾರ ಅಂದರೆ ಜೂನ್ 6ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ.