ಬೆತ್ತಲಾಗಿ ಸಿಂಹಗಳ ಬೋನಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಬೆತ್ತಲಾಗಿ ಸಿಂಹಗಳ ಬೋನಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವಕ

May 22, 2016 06:00:53 PM (IST)

ಸ್ಯಾಂಟಿಯಾಗೋ: ಬೆತ್ತಲಾಗಿ ಸಿಂಹಗಳ ಬೋನಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರಕ್ಷಿಸುವುದಕ್ಕಾಗಿ ಮೃಗಾಲಯ ಸಿಬ್ಬಂದಿ ಬೋನಿನಲ್ಲಿದ್ದ ಎರಡು ಸಿಂಹಗಳನ್ನು ಕೊಂದ ದಾರುಣ ಘಟನೆ ಚಿಲಿಯ ರಾಜಧಾನಿ ಸ್ಯಾಂಟಿಯಾಗೊದಲ್ಲಿ ಶನಿವಾರ ನಡೆದಿದೆ.

ಚಿಲಿಯನ್ ಝೂಗೆ ಆಗಮಿಸಿದ್ದ 20 ವರ್ಷದ ಪ್ರವಾಸಿಗನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಒಮ್ಮಿಂದೊಮ್ಮೆಲೆ ಸಿಂಹಗಳ ಗುಹೆ ಬಳಿಗೆ ಬಂದು ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದಿದ್ದಾನೆ. ಬಳಿಕ ಬಟ್ಟೆಗಳನ್ನ ಕಿತ್ತೆಸೆದು ಸಿಂಹಗಳ ಬಾಯಿಗೆ ಆಹಾರವಾಗಲು ಮುಂದಾಗಿದ್ದಾನೆ. ಇತ್ತ ಆಹಾರ ತಾನಾಗಿಯೇ ಬಂದಿದ್ದನ್ನು ಕಂಡ ಸಿಂಹಗಳು ಆತನ ಮೇಲೆ ದಾಳಿ ಮಾಡಿವೆ.ಕೂಡಲೇ ಎಚ್ಚೆತ್ತುಕೊಂಡ ಮೃಗಾಲಯ ಸಿಬ್ಬಂದಿ ಸಿಂಹಗಳನ್ನು ತೆಪ್ಪಗಾಗಿಸಲು ಯತ್ನಿಸಿದರು. ಆದರೆ ಅರಿವಳಿಕೆ ತಜ್ಞರ ಅಭಾವವಿದ್ದ ಕಾರಣ ಒಂದು ಸಿಂಹ ಹಾಗೂ ಸಿಂಹಿಣಿಯನ್ನು ಕೊಂದು ಹಾಕಿಲಾಯಿತು ಎಂದು ಸ್ಯಾಂಟಿಯಾಗೊ ಮೆಟ್ರೊಪಾಲಿಟನ್ ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಬೋನಿಗೆ ಜೀಗಿದ ಯುವಕ ಸಿಂಹಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ.