ತಿರುವನಂತಪುರಂ: ಕೇರಳದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿದ್ದು, ಈಗಿರುವ ಸ್ಥಿತಿಗತಿ ಪರಿಶೀಲನೆಗಾಗಿ ಇಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೇರಿ ತಿರುವನಂತಪುರದಲ್ಲಿ ಸಭೆ ನಡೆಸಿದ್ದಾರೆ.
ಸದ್ಯ ದಕ್ಷಿಣ ಭಾರತದ ರಾಜ್ಯಗಳಲ್ಲೇ ಅತ್ಯಂತ ಹೆಚ್ಚು ಕೊರೊನಾ ಕೇಸ್ ಗಳು ದಾಖಲಾಗುತ್ತಿರುವುದು ಕೇರಳದಲ್ಲಿ. ಇತ್ತೀಚೆಗೆ ಕೇಂದ್ರದಿಂದ ನುರಿತ ತಜ್ಞರ ತಂಡವೊಂದನ್ನು ಕೇರಳಕ್ಕೆ ಕಳಿಸಲಾಗಿತ್ತು. ಇಂದು ಬೆಳಗ್ಗೆ ಸ್ವತಃ ಕೇಂದ್ರ ಆರೋಗ್ಯ ಸಚಿವರೇ ಇಲ್ಲಿಗೆ ಆಗಮಿಸಿ, ಪರಿಸ್ಥಿತಿ ಪರಿಶೀಲನಾ ಸಭೆ ನಡೆಸಿದ್ದಾರೆ.
ತುರ್ತು ಕೊವಿಡ್ ಪ್ರತಿಕ್ರಿಯಾ ಪ್ಯಾಕೇಜ್-2ರ ಅಡಿ ಕೇರಳಕ್ಕೆ 267.35 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರದಿಂದ ನೀಡಲಾಗುವುದು ಎಂದು ಸಭೆಯ ವೇಳೆ ಸಚಿವ ಮನ್ಸುಖ್ ಮಾಂಡವಿಯಾ ಘೋಷಿಸಿದ್ದಾರೆ.
ಕೇರಳದಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಆರೋಗ್ಯ ಕ್ಷೇತ್ರದ ಮೂಲಸೌಕರ್ಯಗಳನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಹಣ ಬಿಡುಗಡೆ ಮಾಡಲಾಗುತ್ತಿದೆ. ಇದರೊಂದಿಗೆ, ಕೇರಳದ ಎಲ್ಲ ಜಿಲ್ಲೆಗಳಲ್ಲಿ ಔಷಧಗಳ ಲಭ್ಯತೆ ಪ್ರಮಾಣ ಹೆಚ್ಚಿಸಲು ಹೆಚ್ಚುವರಿಯಾಗಿ ಒಂದು ಕೋಟಿ ಬಿಡುಗಡೆ ಮಾಡಲಾಗುವುದು ಎಂದೂ ಹೇಳಿದ್ದಾರೆ.