ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಅವರ ತುಟ್ಟಿಭತ್ಯೆ ಯನ್ನು (ಡಿಎ ಮತ್ತು ಡಿಆರ್) ಶೇ 17ರಿಂದ ಶೇ 28ಕ್ಕೆ ಹೆಚ್ಚಿಸಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ತಿಳಿಸಿದರು.
ತುಟ್ಟಿಭತ್ಯೆ ಹೆಚ್ಚಳವು 2021ರ ಜುಲೈ 1ರಿಂದ ಅನ್ವಯವಾಗಲಿದ್ದು, ಕೇಂದ್ರ ಸರ್ಕಾರದ 48.34 ಲಕ್ಷ ನೌಕರರು ಹಾಗೂ 65.26 ಲಕ್ಷ ಪಿಂಚಣಿದಾರರು ಇದರ ಪ್ರಯೋಜನ ಪಡೆಯಲಿದ್ದಾರೆ.
ಈ ಹೆಚ್ಚಳದಿಂದಾಗಿ ಕೇಂದ್ರದ ಬೊಕ್ಕಸಕ್ಕೆ ₹ 34,401 ಕೋಟಿ ಹೊರೆ ಬೀಳಲಿದೆ ಎಂದು ಅವರು ಹೇಳಿದರು.
ಕೋವಿಡ್ ಕಾರಣದಿಂದ ಕೇಂದ್ರ ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರ ತುಟ್ಟಿಭತ್ಯೆ ಹೆಚ್ಚಳವನ್ನು 2020ರ ಜನವರಿ 1ರಿಂದ ತಡೆ ಹಿಡಿಯಲಾಗಿತ್ತು. 2020ರ ಜನವರಿ 1, 2020ರ ಜುಲೈ 1 ಮತ್ತು 2021ರ ಜನವರಿ1ರ ಮೂರು ಕಂತುಗಳು ಬಾಕಿ ಆಗಿದ್ದವು. ಆದರೆ, ತಡೆ ಹಿಡಿದ ಅವಧಿಯ ಹಿಂಬಾಕಿ ಸಿಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.