ದೆಹಲಿ: ಪ್ರಧಾನಿ ನರೇಂದ್ರ ಮೋದಿ ಯವರ ಟ್ವಿಟರ್ ಅಕೌಂಟ್ ನಲ್ಲಿ ಫಾಲೋವರ್ಸ್ ಸಂಖ್ಯೆ 70 ಮಿಲಿಯನ್ (7 ಕೋಟಿ) ದಾಟಿದ್ದು, ಇದೊಂದು ಹೊಸ ಮೈಲಿಗಲ್ಲಾಗಿದೆ. ಈ ಮೂಲಕ ಸಾಮಾಜಿಕ ಜಾಲತಾಣ ಗಳಲ್ಲಿ ಅತಿಹೆಚ್ಚು ಅನುಯಾಯಿಗಳನ್ನು ಹೊಂದಿರುವ ಜಾಗತಿಕ ಸಕ್ರಿಯ ರಾಜಕಾರಣಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದಾರೆ. ನರೇಂದ್ರ ಮೋದಿಯವರು 2009ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಿನ ಸಂದರ್ಭದಲ್ಲಿ ಟ್ವಿಟರ್ ಬಳಕೆ ಶುರು ಮಾಡಿದ್ದರು. 2010ರ ಹೊತ್ತಿಗೆ ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದರು. 2020ರಲ್ಲಿ ನರೇಂದ್ರ ಮೋದಿ ಟ್ವಿಟರ್ ಅಕೌಂಟ್ ಫಾಲೋವರ್ಸ್ ಸಂಖ್ಯೆ 60 ಮಿಲಿಯನ್ ಮಾರ್ಕ್ನ್ನು ದಾಟಿತ್ತು.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಟ್ವಿಟರ್ನಲ್ಲಿ 30.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದರೆ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ 129.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಹಾಗೇ ಫ್ರಾನ್ಸ್ ಅಧ್ಯಕ್ಷ ಎಮ್ಮಾನ್ಯುಯೆಲ್ ಮಾಕ್ರೋನ್ 7.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ನಮ್ಮ ಗೃಹ ಸಚಿವ ಅಮಿತ್ ಶಾರಿಗೆ ಟ್ವಿಟರ್ನಲ್ಲಿ 26.3 ಮಿಲಿಯನ್ ಅನುಯಾಯಿಗಳು ಇದ್ದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 19.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವಿಟರ್ ಸೇರಿ ಎಲ್ಲ ರೀತಿಯ ಸಾಮಾಜಿಕ ಮಾಧ್ಯಮಗಳಲ್ಲೂ ಸದಾ ಸಕ್ರಿಯರಾಗಿರುತ್ತಾರೆ. ಗಣ್ಯರ ಹುಟ್ಟುಹಬ್ಬಗಳಿಗೆ ವಿಶ್ ಮಾಡುವುದು, ಸಾಧಕರನ್ನು ಗೌರವಿಸುವ, ಎಲ್ಲಾದರೂ ದುರಂತವಾದಾಗ, ಯಾರಾದರೂ ಮಡಿದಾಗ ಸಂತಾಪ ಸೂಚಿಸುವ ಪೋಸ್ಟ್ಗಳನ್ನು ಹಾಕುತ್ತಾರೆ. ಕಳೆದ ಮಹಿಳಾ ದಿನಾಚರಣೆಯಂದು ತಮ್ಮ ಸಾಮಾಜಿಕ ಜಾಲತಾಣಗಳನ್ನು ಸಾಧಕ ಮಹಿಳೆಯರಿಗೆ ಬಿಟ್ಟುಕೊಟ್ಟಿದ್ದನ್ನೂ ಇಲ್ಲಿ ಸ್ಮರಿಸಬಹುದು.