ಭಾರತವು ಮುಂದಿನ ತಿಂಗಳು ಹೆಚ್ಚುವರಿ ಕೋವಿಡ್ ಲಸಿಕೆಗಳ ರಫ್ತನ್ನು ಪುನರಾರಂಭಿಸಲಿದೆ. ಜಾಗತಿಕ ಲಸಿಕೆ ಹಂಚಿಕೆ ಕಾರ್ಯಕ್ರಮ ‘ಕೋವ್ಯಾಕ್ಸ್’ಗೆ ಭಾರತ ಬದ್ಧತೆ ಪ್ರದರ್ಶಿಸುತ್ತಿದೆ. ಆದರೂ ನಮ್ಮ ನಾಗರಿಕರಿಗೆ ಲಸಿಕೆ ಪೂರೈಸುವುದು ನಮ್ಮ ಅದ್ಯತೆಯಾಗಿರಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಸೋಮವಾರ ಹೇಳಿದರು.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಅಕ್ಟೋಬರ್ನಲ್ಲಿ 30 ಕೋಟಿ ಡೋಸ್ ಮತ್ತು ಮುಂದಿನ ಮೂರು ತಿಂಗಳಲ್ಲಿ 100 ಕೋಟಿ ಡೋಸ್ಗಳು ನಮಗೆ ಲಭ್ಯವಾಗಲಿವೆ,’ ಎಂದು ಅವರು ತಿಳಿಸಿದರು. ದೇಶಾದ್ಯಂತ ಇದುವರೆಗೆ 81 ಕೋಟಿ ಡೋಸ್ಗಳನ್ನು ನೀಡಲಾಗಿದೆ. ಕೊನೆಯ 10 ಕೋಟಿ ಡೋಸ್ಗಳನ್ನು ಕೇವಲ 11 ದಿನಗಳಲ್ಲಿ ನೀಡಲಾಗಿದೆ ಎಂದು ಅವರು ಹೇಳಿದರು.
ನಮ್ಮ ಪ್ರಜೆಗಳಿಗೆ ಲಸಿಕೆ ನೀಡುವುದು ಸರ್ಕಾರದ ಆದ್ಯತೆಯಾಗಿದೆ. ಮುಂದಿನ ತ್ರೈಮಾಸಿಕದಲ್ಲಿ (ಅಕ್ಟೋಬರ್-ಡಿಸೆಂಬರ್) ‘ಲಸಿಕೆ ಮೈತ್ರಿ’ ಕಾರ್ಯಕ್ರಮದ ಅಡಿಯಲ್ಲಿ ಹೆಚ್ಚುವರಿ ಲಸಿಕೆಗಳ ರಫ್ತು ಮಾಡಲಾಗುತ್ತದೆ. ಇದು ನಮ್ಮ ‘ವಸುಧೈವ ಕುಟುಂಬಕಂ’ ಎಂಬ ಧ್ಯೇಯ ವಾಕ್ಯಕ್ಕೆ ಅನುಗುಣವಾಗಿದೆ,’ ಎಂದು ಅವರು ಹೇಳಿದರು. ಭಾರತದ ಲಸಿಕೆ ಅಭಿಯಾನವು ವಿಶ್ವಕ್ಕೆ ಮಾದರಿಯಾಗಿದೆ ಮತ್ತು ಅಭಿಯಾನವು ಅತ್ಯಂತ ವೇಗದಲ್ಲಿ ನಡೆಯುತ್ತಿದೆ ಎಂದು ಅವರು ಹೇಳಿದರು.