ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ನಾಲ್ವರು ಮಕ್ಕಳು ಸೇರಿದಂತೆ ಇನ್ನೂ 12 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 100ಕ್ಕೆ ಏರಿಕೆಯಾಗಿದೆ.
ರಾಜ್ಯದ 34 ಜಿಲ್ಲೆಗಳ ಪೈಕಿ 32 ಜಿಲ್ಲೆಗಳಲ್ಲಿ 54.57 ಲಕ್ಷ ಜನರು ಬಾಧಿತರಾಗಿದ್ದಾರೆ. ಪ್ರವಾಹದ ನೀರು ಕಡಿಮೆಯಾದ ನಂತರ, ಪ್ರಳಯಕ್ಕೆ ಕಾರಣವಾದ ಅಂಶಗಳಿಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದರು.
ನಗಾಂವ್ ಮತ್ತು ಮೋರಿಗಾಂವ್ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ಕೆಲವು ಸ್ಥಳಗಳಲ್ಲಿ ರೈಲು ಪ್ರಯಾಣ ಕೈಗೊಂಡರು. ಸೇನೆ ಮತ್ತು ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಸ್ಪಂದನ ಏಜೆನ್ಸಿಗಳು ಪ್ರವಾಹ ಪೀಡಿತ ಜನರಿಗೆ ಸಹಾಯ ಮಾಡಲು ಹಗಲಿರುಳು ಶ್ರಮಿಸುತ್ತಿವೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್ಡಿಎಂಎ) ಅಧಿಕಾರಿಗಳು, ಹೋಜೈನಲ್ಲಿ ನಾಲ್ಕು ಮತ್ತು ನಲ್ಬರಿ ಜಿಲ್ಲೆಗಳಲ್ಲಿ ಮೂರು ಸೇರಿದಂತೆ ಐದು ಜಿಲ್ಲೆಗಳಿಂದ 12 ಸಾವುಗಳು ವರದಿಯಾಗಿವೆ ಎಂದು ತಿಳಿಸಿದ್ದಾರೆ.
ಎಎಸ್ಡಿಎಂಎ ಅಧಿಕಾರಿಗಳ ಪ್ರಕಾರ, ಈ ವರ್ಷದ ಏಪ್ರಿಲ್ ನಿಂದ, ಪ್ರವಾಹದಲ್ಲಿ 83 ಜನರು ಸಾವನ್ನಪ್ಪಿದ್ದಾರೆ ಮತ್ತು ಇತರ 17 ಜನರು ಭೂಕುಸಿತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
4,941 ಹಳ್ಳಿಗಳ 11,67, 219 ಮಕ್ಕಳು ಸೇರಿದಂತೆ 54,57,601 ಜನರು ಬಾಧಿತರಾಗಿದ್ದಾರೆ. ಬಾಧಿತ ಪ್ರದೇಶಗಳಲ್ಲಿ ಒಟ್ಟು 845 ಪರಿಹಾರ ಶಿಬಿರಗಳು ಮತ್ತು 1,026 ಪರಿಹಾರ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ.
ಒಟ್ಟು 2,71,125 ಜನರು ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದು, 99,026 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಬ್ರಹ್ಮಪುತ್ರ, ಕೋಪಿಲಿ ಮತ್ತು ದಿಸಾಂಗ್ ಎಂಬ ಮೂರು ನದಿಗಳ ನೀರು ಹಲವಾರು ಸ್ಥಳಗಳಲ್ಲಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.