ರಾಯ್‌ಪುರ, ಫೆ.25: ಪಕ್ಷದ 85ನೇ ಸರ್ವಸದಸ್ಯರ ಸಮಾವೇಶದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಶನಿವಾರ ರಾಯ್‌ಪುರಕ್ಕೆ ಆಗಮಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರನ್ನು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಮೋಹನ್ ಮಾರ್ಕಮ್ ಅವರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.
ವಿಮಾನ ನಿಲ್ದಾಣದಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ನಾಯಕರಾದ ನಸಿಮುದ್ದೀನ್ ಸಿದ್ದಿಕಿ, ಅಜಯ್ ರೈ, ರಾಜ್ಯಾಧ್ಯಕ್ಷ ಬ್ರಿಜ್ ಲಾಲ್ ಖಾಬ್ರಿ ಉಪಸ್ಥಿತರಿದ್ದರು.
ಅಧಿವೇಶನದ ಎರಡು ದಿನ ರಾಜಕೀಯ, ಆರ್ಥಿಕ ಮತ್ತು ಅಂತಾರಾಷ್ಟ್ರೀಯ ಎಂಬ ಮೂರು ನಿರ್ಣಯಗಳನ್ನು ಕೈಗೆತ್ತಿಕೊಳ್ಳಲಾಗುವುದು.
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಉದ್ಘಾಟನಾ ಭಾಷಣದೊಂದಿಗೆ ಅಧಿವೇಶನ ಪ್ರಾರಂಭವಾಗಲಿದ್ದು, ನಂತರ ವಿಷಯ ಸಮಿತಿಯು ಮುಂದಿಟ್ಟ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.