ನವದೆಹಲಿ, ಡಿ.18 : ಓಮಿಕ್ರಾನ್ ನಿಯಂತ್ರಣಕ್ಕೆ ಕೋವಿಶೀಲ್ಡ್ ಗಿಂತಲೂ ದೇಶಿ ನಿರ್ಮಿತ ಕೋವ್ಯಾಕ್ಸ್ ಬೂಸ್ಟರ್ ಲಸಿಕೆ ಪರಿಣಾಮಕಾರಿ ಎಂದು ಭಾರತೀಯ ವಿಜ್ಞಾನಿ ಹೇಳಿದ್ದಾರೆ. ಭಾರತೀಯ ಸಾರ್ಸ್ ಕೋವ್-2 ಜಿನೋಮಿಕ್ಸ್ ಕನ್ಸೋರ್ಟಿಯಂ (ಐಎನ್‍ಎಸ್‍ಎಸಿಂಜಿ) ನಿರ್ದೇಶಕ ಅನುರಾಗ್ ಅಗರ್‍ವಾಲ್ ಕೇಂದ್ರ ಸರ್ಕಾರಕ್ಕೆ ಈ ಕುರಿತು ಶಿಫಾರಸ್ಸು ಮಾಡಿದ್ದಾರೆ.
ವಿದೇಶದಲ್ಲಿ ನೋವ್ಯಾಕ್ಸ್ ಎಂದು ಕರೆಯಲಾಗುವ ಭಾರತೀಯ ನಿರ್ಮಿತ ಕೋವ್ಯಾಕ್ಸ್ ಲಸಿಕೆಗೆ ಇತ್ತೀಚೆಗೆ ವಿಶ್ವಸಂಸ್ಥೆ ಜಾಗತಿಕ ಮನ್ನಣೆ ನೀಡಿದೆ.
ನೋವ್ಯಾಕ್ಸ್ ಐಎನ್‍ಸಿ ಅಭಿವೃದ್ಧಿ ಪಡಿಸಿದ ಮರುಸಂಯೋಜಿತ ಪ್ರೋಟಿನ್‍ಗಳ ಈ ಲಸಿಕೆಯ ಸುರಕ್ಷಿತ ಪ್ರೋಫೈಲ್ ಉತ್ತಮವಾಗಿದೆ.ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯ ಇರುವ ಎಲ್ಲಾ ಲಸಿಕೆಗಳಿಗಿಂತಲೂ ರೋಗ ನಿರೋಧಕ ಶಕ್ತಿ ವೃದ್ಧಿಸುವಲ್ಲಿ ಕೋವ್ಯಾಕ್ಸ್ ಮುಂದಿದೆ ಎಂದು ಅಗರ್‍ವಾಲ್ ಹೇಳಿದ್ದಾರೆ.
ಓಮಿಕ್ರಾನ್ ತಡೆಯಲು ಕೋವ್ಯಾಕ್ಸ್ ಬೂಸ್ಟರ್ ಲಸಿಕೆ ಅಸ್ಟ್ರೇಜೆನಿಕಾ ಮತ್ತು ಕೋವಿಶೀಲ್ಡ್ ಲಸಿಕೆಗಳಿಗಿಂತಲೂ ಶೇ.50ರಷ್ಟು ಹೆಚ್ಚು ಪರಿಣಾಮಕಾರಿ. ದಕ್ಷಿಣ ಆಫ್ರಿಕಾದಲ್ಲಿ 29,960 ಮಂದಿಯ ಮೇಲೆ ಮೂರನೇ ಹಂತದ ಪ್ರಯೋಗಾಲಯ ಪರೀಕ್ಷೆಗಳು ನಡೆದಾಗ ಫಲಿತಾಂಶ ಯಶಸ್ವಿಯಾಗಿದೆ.
ಫೈಜರ್ ಮತ್ತು ಮಡ್ರೆನಾ ಲಸಿಕೆಗಳನ್ನು ಕೋವ್ಯಾಕ್ಸ್ ಹಿಂದಿಕ್ಕಿದೆ. ಬ್ರಿಟನ್‍ನಲ್ಲಿ ನಡೆದ ಪ್ರಯೋಗ ಪರೀಕ್ಷೆಯಲ್ಲಿ ಶೇ.96ರಷ್ಟು ಉತ್ತಮ ಎಂದು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.