ನವದೆಹಲಿ: ರಷ್ಯಾದ ಸೇನಾ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಏರ್ ಇಂಡಿಯಾ ವಿಮಾನವೊಂದು ಶನಿವಾರ ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಿಂದ ರೊಮೇನಿಯಾ ರಾಜಧಾನಿ ಬುಕಾರೆಸ್ಟ್‌ಗೆ ತೆರಳಿದೆ.
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಏರ್ ಇಂಡಿಯಾ ಶನಿವಾರ ಬುಕಾರೆಸ್ಟ್ ಮತ್ತು ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ಗೆ ಹೆಚ್ಚಿನ ವಿಮಾನಗಳನ್ನು ಕಳುಹಿಸಲಿದೆ.
ಎಐ 1943 ವಿಮಾನವು ಮುಂಬೈ ವಿಮಾನ ನಿಲ್ದಾಣದಿಂದ ಮುಂಜಾನೆ 3.40ರ ಸುಮಾರಿಗೆ ಹೊರಟಿದ್ದು, ಬೆಳಗ್ಗೆ 10 ಗಂಟೆ (ಭಾರತೀಯ ಕಾಲಮಾನ) ಸುಮಾರಿಗೆ ಬುಕಾರೆಸ್ಟ್ ವಿಮಾನ ನಿಲ್ದಾಣದಲ್ಲಿ ಇಳಿದಿರುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ರಸ್ತೆ ಮೂಲಕ ಉಕ್ರೇನ್-ರೊಮೇನಿಯಾ ಗಡಿಯನ್ನು ತಲುಪಿದ ಭಾರತೀಯ ಪ್ರಜೆಗಳನ್ನು ಅಲ್ಲಿನ ಭಾರತೀಯ ಅಧಿಕಾರಿಗಳು ಬುಕಾರೆಸ್ಟ್‌ಗೆ ಕರೆದೊಯ್ಯುತ್ತಿದ್ದಾರೆ.
ಬಳಿಕ, ಅವರನ್ನು ಅಲ್ಲಿಂದ ಏರ್ ಇಂಡಿಯಾ ವಿಮಾನದ ಮೂಲಕ ಸ್ಥಳಾಂತರಿಸಬಹುದು ಎಂದು ಅವರು ಹೇಳಿದರು.
ಫೆಬ್ರವರಿ 24ರ ಬೆಳಿಗ್ಗೆಯಿಂದ ನಾಗರಿಕ ವಿಮಾನ ಕಾರ್ಯಾಚರಣೆಗೆ ಉಕ್ರೇನ್ ವಾಯುಪ್ರದೇಶವನ್ನು ಮುಚ್ಚಲಾಗಿದೆ. ಆದ್ದರಿಂದ, ಸ್ಥಳಾಂತರ ವಿಮಾನಗಳು ಬುಕಾರೆಸ್ಟ್ ಮತ್ತು ಬುಡಾಪೆಸ್ಟ್‌ನಿಂದ ಕಾರ್ಯನಿರ್ವಹಿಸುತ್ತಿವೆ.
ಸುಮಾರು 20,000 ಭಾರತೀಯರು, ಮುಖ್ಯವಾಗಿ ವಿದ್ಯಾರ್ಥಿಗಳು, ಪ್ರಸ್ತುತ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್ ವಾಯುಪ್ರದೇಶವನ್ನು ಮುಚ್ಚುವ ಮೊದಲು, ಫೆಬ್ರವರಿ 22 ರಂದು ರಾಜಧಾನಿ ಕೀವ್‌ನಿಂದ ಒಂದು ಏರ್ ಇಂಡಿಯಾ ವಿಮಾನದ ಮೂಲಕ 240 ಜನರನ್ನು ಭಾರತಕ್ಕೆ ಕರೆತರಲಾಗಿತ್ತು.
ಫೆಬ್ರುವರಿ 24 ಮತ್ತು 26ರಂದು ಇನ್ನೂ ಎರಡು ವಿಮಾನಗಳನ್ನು ನಿರ್ವಹಿಸಲು ಯೋಜಿಸಲಾಗಿತ್ತು. ಆದರೆ, 24 ರಂದೇ ರಷ್ಯಾದ ಆಕ್ರಮಣವು ಪ್ರಾರಂಭವಾದ ಕಾರಣ ಉಕ್ರೇನ್ ವಾಯುಪ್ರದೇಶವನ್ನು ಮುಚ್ಚಲಾಯಿತು. ಹೀಗಾಗಿ, ಸ್ಥಳಾಂತರ ಪ್ರಕ್ರಿಯೆ ಸಾಧ್ಯವಾಗಲಿಲ್ಲ.
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಕರೆತರಲು ವಿಶೇಷ ಸರ್ಕಾರಿ ಚಾರ್ಟರ್ ವಿಮಾನಗಳಾಗಿ ಏರ್ ಇಂಡಿಯಾದ ಬಿ787 ವಿಮಾನಗಳು ಶನಿವಾರ, ದೆಹಲಿ ಮತ್ತು ಮುಂಬೈನಿಂದ ಬುಕಾರೆಸ್ಟ್ ಮತ್ತು ಬುಡಾಪೆಸ್ಟ್‌ಗೆ ಹಾರಾಟ ನಡೆಸಲಿವೆ ಎಂದು ಏರ್ ಇಂಡಿಯಾ ಶುಕ್ರವಾರ ರಾತ್ರಿ ಟ್ವೀಟ್ ಮೂಲಕ ತಿಳಿಸಿದೆ.
ರೊಮೇನಿಯಾ ಮತ್ತು ಹಂಗೇರಿ ಮೂಲಕವಾಗಿ ಭಾರತೀಯರ ಸ್ಥಳಾಂತರಕ್ಕೆ ಯತ್ನಿಸಲಾಗುತ್ತಿದೆ ಎಂದು ಉಕ್ರೇನ್‌ನ ಭಾರತೀಯ ರಾಯಭಾರ ಕಚೇರಿ ಶುಕ್ರವಾರ ತಿಳಿಸಿದೆ.