ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೋಮವಾರಕ್ಕೆ ಬರೋಬ್ಬರಿ 8 ವರ್ಷಗಳನ್ನು ಪೂರ್ಣಗೊಳಿಸಿದೆ.
ಮೊದಲ ಅವಧಿಯಲ್ಲಿ 5 ವರ್ಷ ಮತ್ತು ಎರಡನೇ ಅವಧಿಯಲ್ಲಿ 3 ವರ್ಷದ ಆಡಳಿತ ಪೂರ್ಣಗೊಂಡಿದ್ದು, ಬಿಜೆಪಿಯಲ್ಲಿ 8ನೇ ವರ್ಷಾಚರಣೆಯ ಸಂಭ್ರಮ ಕಳೆಗಟ್ಟಿದೆ.
“ನವಭಾರತ’ ಹಾಗೂ “ಒಳ್ಳೆಯ ದಿನ’ಗಳ ಕನಸಿನೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಪ್ರಧಾನಿ ಮೋದಿ ಅವರು ಕಳೆದ 8 ವರ್ಷಗಳಲ್ಲಿ ರೈತರಿಂದ ಹಿಡಿದು ಕೂಲಿ ಕಾರ್ಮಿಕರು, ಮಧ್ಯಮ ವರ್ಗ, ಉದ್ಯಮಿಗಳವರೆಗೆ ಎಲ್ಲ ವರ್ಗದವರ ಏಳಿಗೆಗಾಗಿ ಶ್ರಮಿಸಿದ್ದಾರೆ. ಹಲವು ಜನೋಪಯೋಗಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ದೇಶವಾಸಿಗಳ ಜೀವನಮಟ್ಟ ಸುಧಾರಣೆಗೆ ಪ್ರಯತ್ನಿಸಿದ್ದಾರೆ.
ಕೊರೊನಾ ಬಿಕ್ಕಟ್ಟು ನಿರ್ವಹಣೆ, ನಾಗರಿಕರಿಗೆ ಉಚಿತ ಲಸಿಕೆ ವಿತರಣೆ, ಬಡವರಿಗೆ ರಿಯಾಯ್ತಿ ದರದಲ್ಲಿ ಆಹಾರಧಾನ್ಯ ಪೂರೈಕೆ, ತ್ರಿವಳಿ ತಲಾಖ್ ರದ್ದು, ಆತ್ಮನಿರ್ಭರ ಭಾರತ ನಿರ್ಮಾಣದವರೆಗೆ ಅವರು ಕೈಗೊಂಡ ಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ಸರ್ಕಾರ 8 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಜೂ.14ರವರೆಗೆ ದೇಶವ್ಯಾಪಿ ಜನಸಂಪರ್ಕ ಕಾರ್ಯಕ್ರಮಗಳನ್ನು ಬಿಜೆಪಿ ಹಮ್ಮಿಕೊಂಡಿದೆ. ಮೋದಿ ಅವರು ಸೋಮವಾರ ಶಿಮ್ಲಾದಲ್ಲಿ ರೋಡ್ ಶೋ ಹಾಗೂ ರ್ಯಾಲಿ ನಡೆಸಲಿದ್ದಾರೆ.