ದೆಹಲಿ: ಕೇಂದ್ರದ ಚಳಿಗಾಲದ ಅಧಿವೇಶನವು ಹೊಸ ಸಂಸತ್ ಭವನದಲ್ಲಿ ನಡೆಯಲಿದೆ ಎಂದು ಲೋಕಸಭೆಯ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಹೇಳಿದ್ದಾರೆ.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು “ಹೊಸ ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನವನ್ನು ಪ್ರಾರಂಭಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ತಾಂತ್ರಿಕ ಮತ್ತು ಭದ್ರತಾ ದೃಷ್ಟಿಕೋನದಿಂದ, ಈ ಹೊಸ ಕಟ್ಟಡವು ಹಳೆಯ ಸಂಸತ್ತಿನ ಕಟ್ಟಡಕ್ಕಿಂತ ಬಹಳ ಮುಂದಿದೆ. ಆದರೆ ಸಂಸತ್ತಿನ ಹಳೆಯ ಕಟ್ಟಡವು ಅದರ ಭಾಗವಾಗಿ ಉಳಿಯುತ್ತದೆ.” ಎಂದಿದ್ದಾರೆ.
“ಸದನದ ಉತ್ಪಾದಕತೆಯು ಹೆಚ್ಚಳವಾಗಿದೆ. ತಡರಾತ್ರಿಯವರೆಗೂ ಈಗ ಅಧಿವೇಶನಗಳು ನಡೆಯುತ್ತಿವೆ” ಎಂದು ಹರ್ಷ ವ್ಯಕ್ತಪಡಿಸಿರುವ ಅವರು “ಸದನ ಸುಗಮವಾಗಿ ನಡೆಯುವ ದೃಷ್ಟಿಯಿಂದ ಸದನದಲ್ಲಿ ಶಿಸ್ತು, ಸೌಹಾರ್ದತೆ ಕಾಪಾಡಬೇಕು ಎಂದು ನಾನು ಹೇಳುತ್ತೇನೆ. ಎಲ್ಲಾ ಪಕ್ಷಗಳು ತಮ್ಮ ನಾಯಕರೊಂದಿಗೆ ಮಾತಾಡಬೇಕು. ಅವರ ಸಹಕಾರದಿಂದ ಸದನದಲ್ಲಿ ಉತ್ಪಾದಕತೆ ಮತ್ತು ಚರ್ಚೆಯ ಮಟ್ಟ ಗಣನೀಯವಾಗಿ ಹೆಚ್ಚಿದೆ” ಎಂದಿದ್ದಾರೆ.
ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರಕಾರ, ಈ ವರ್ಷದ ಅಕ್ಟೋಬರ್ ವೇಳೆಗೆ ಹೊಸ ಸಂಸತ್ ಭವನದ ನಿರ್ಮಾಣ ಪೂರ್ಣಗೊಳ್ಳಲಿದೆ.