ನವದೆಹಲಿ : ಮಡಿಕೇರಿ ಹೊರವಲಯದ ಕರ್ಣಂಗೇರಿ ಗ್ರಾಮದ ಸರ್ವೆ ನಂಬರ್ 289 ರಲ್ಲಿ ಮೀಸಲು ಅರಣ್ಯವನ್ನು ಪ್ರಭಾವಿ ವ್ಯಕ್ತಿಗಳು ಒತ್ತುವಾರಿ ಮಾಡಿಕೊಂಡಿದ್ದಾರೆ ಎಂದು ಕಾವೇರಿ ಸೇನೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟು ಈ ಸಂಬಂಧ ರಾಜ್ಯ ಸರ್ಕಾರ ಪ್ರತಿಕ್ರಿಯೆ ನೀಡಲು ನೋಟೀಸ್ ಜಾರಿಗೊಳಿಸಿದೆ.
ಈ ಕುರಿತು ಕಾವೇರಿ ಸೇನೆಯು ವೀರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ಸೇರಿದಂತೆ ಪ್ರಭಾವೀ ವ್ಯಕ್ತಿಗಳು ಮೀಸಲು ಅರಣ್ಯವನ್ನು ಒತ್ತುವರಿ ಮಾಡಿಕೊಂಡಿದ್ದು ಸದರಿ ಒತ್ತುವರಿದಾರರನ್ನು ತೆರವುಗೊಳಿಸಿ ಅರಣ್ಯವನ್ನು ಸಂರಕ್ಷಣೆ ಮಾಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿತ್ತು.
ಕಾವೇರಿ ಸೇನೆಯ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಂಜಯ್ ಸುಲಿ ಅವರ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರ ಪೀಠವು ಕರ್ನಾಟಕ ರಾಜ್ಯ ಸರ್ಕಾರಕ್ಕೆ ನೋಟೀಸ್ ನೀಡಿ ಸರ್ಕಾರದ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುವಂತೆ ಆದೇಶಿಸಿದೆ.
ತಮ್ಮ ಅರ್ಜಿಯಲ್ಲಿ ಕಾವೇರಿ ಸೇನೆಯು ,ವನ್ಯಜೀವಿ ಸಂರಕ್ಷಣಾ ಕಾಯಿದೆ, 1973 ರ ಅಡಿಯಲ್ಲಿ ಸಂರಕ್ಷಿಸಲ್ಪಟ್ಟಿರುವ ವನ್ಯಜೀವಿಗಳ ಶೇಕಡಾ 75 ರಷ್ಟು ಸೇರಿದಂತೆ ಅಳಿವಿನಂಚಿನಲ್ಲಿರುವ ಹಲವಾರು ವನ್ಯ ಜೀವಿಗಳಿಗೆ ಕೊಡಗು ಆಶ್ರಯ ನೀಡಿದೆ ಎಂಬ ಅಂಶವನ್ನು ಪ್ರತಿಪಾದಿಸಿದ್ದು ಒತ್ತುವಾರಿದಾರರನ್ನು ತೆರವುಗೊಳಿಸುವಂತೆ ಓತ್ತಾಯಿಸಿತ್ತು. ಅರ್ಕಾರದ ಮಾಲೀಕತ್ವದ ಭೂಮಿಯನ್ನು ಅಂರಕ್ಷಿಸಬೇಕಾದ ಅಧಿಕಾರಿಗಳೇ ಒತ್ತುವರಿದಾರರಿಗೆ ಬೆಂಗಾವಲಾಗಿ ನಿಂತು ಫಾರ್ಮ್ ನಂಬರ್ 3 , ಆರ್ ಟಿಸಿ ಇತ್ಯಾದಿ ಎಲ್ಲಾ ದಾಖಲಾತಿಗಳನ್ನು ಮಾಡಿಕೊಟ್ಟಿದ್ದಾರೆಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಸದರಿ ಅರ್ಜಿಯನ್ನು ರಾಜ್ಯ ಹೈ ಕೋರ್ಟಿನಲ್ಲಿ ಸಲ್ಲಿಸಲಾಗಿದ್ದು ಹೈ ಕೋರ್ಟು ದಿನಾಂಕ ನವೆಂಬರ್ 17 ರಂದು ಕಾವೇರಿ ಸೇನೆಯ ಅರ್ಜಿಯನ್ನು ವಜಾಗೊಳಿಸಿತ್ತು. ನಂತರ ತೀರ್ಪಿನ ಮರುಪರಿಶೀಲನೆಗೂ ಹೈ ಕೋರ್ಟು ತಿರಸ್ಕರಿಸಿದ ನಂತರ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು.
ಈ ಕುರಿತು ಮಾತನಾಡಿದ ಕಾವೇರಿ ಸೇನೆಯ ಜಿಲ್ಲಾ ಸಂಚಾಲಕ ರವಿ ಚಂಗಪ್ಪ ಅವರು ಅರಣ್ಯ ಭೂಮಿಯನ್ನು ರಕ್ಷಿಸುವ ಯಾವುದೇ ಪ್ರಯತ್ನ ಮಾಡದೇ ಅಧಿಕಾರಿಗಳು ಒತ್ತುವರಿದಾರರ ಪರ ನಿಂತು ಅವರಿಗೆ ಎಲ್ಲ ದಾಖಲಾತಿಗಳನ್ನು ಅಕ್ರಮವಾಗಿ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು. ಇಲ್ಲಿ ಸುಮಾರು 300 ಮನೆಗಳನ್ನು ಒತ್ತುವರಿದಾರರು ನಿರ್ಮಿಸಿಕೊಂಡು ವಾಸಿಸುತಿದ್ದು ಇದರಲ್ಲಿ ಶಾಸಕ ಕೆ ಜಿ ಬೋಪಯ್ಯ ಸೇರಿದಂತೆ , ಇನ್ನಿತರ ಪ್ರಭಾವಿ ವ್ಯಕ್ತಿಗಳೂ ಇದ್ದಾರೆ ಎಂದು ಅವರು ಹೇಳಿದರು. ಮಡಿಕೇರಿ ನಗರ ಸಭೆ, ಕಂದಾಯ ಮತ್ತು ಅರಣ್ಯಾಧಿಕಾರಿಗಳು ಈ ಅಕ್ರಮ ಭೂ ಮಂಜೂರಾತಿಯಲ್ಲಿ ಶಾಮೀಲಾಗಿದ್ದಾರೆ ಎಂದೂ ಅವರು ಆರೋಪಿಸಿದರು. ತಾವು ಉಪ ನೋಂದಣಾಧಿಕಾರಿಯವರ ಕಚೇರಿಯಿಂದ ಕರ್ಣಂಗೇರಿ ಗ್ರಾಮದ ಸರ್ವೆ ನಂಬರ್ 289 ರಲ್ಲಿ ಹಿಂದೆ ನೋಂದಾವಣೆ ಆಗಿರುವ ಆಸ್ತಿಗಳ ಮಾಹಿತಿಯನ್ನು ಪಡೆದುಕೊಂಡಿದ್ದು ಎಲ್ಲ ಒತ್ತುವರಿದಾರರಿಗೂ ಸದರಿ ಸರ್ವೆ ನಂಬರ್ ನಿಂದ ಭೂಮಿ ವಿಂಗಡಣೆ ಆಗಿರುವ ಮಾಹಿತಿಯೇ ಇಲ್ಲ . ಡಿನೋಟಿಫೈ ಆಗಿದ್ದರೆ ಅದೇ ಸರ್ವೆ ನಂಬರ್ ಇರಬೇಕಿತ್ತು ಎಂದು ಹೇಳಿದರಲ್ಲದೆ ತಮ್ಮ್ಮ ಕಾನೂನು ಹೋರಾಟ ಮುಂದುವರಿಯಲಿದೆ ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ವೀರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ಅವರು ಓಟ್ಟು 282.5 ಎಕರೆ ವಿಸ್ತೀರ್ಣವಿದ್ದ ಮೀಸಲು ಅರಣ್ಯದಲ್ಲಿ 36 ಎಕರೆಗಳನ್ನು 1930 ರ ದಶಕದಲ್ಲಿ ಬ್ರಿಟಿಷರ ಕಾಲದಲ್ಲಿಯೇ ಅರಣ್ಯ ಭೂಮಿಯಿಂದ ಕಂದಾಯ ಭೂಮಿಯನ್ನಾಗಿ ಡಿನೋಟಿಫೈ ಮಾಡಲಾಗಿದ್ದು ಯಾರೊಬ್ಬರೂ ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿಲ್ಲ ಎಂದರು. ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇಂತಹ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಜನರಲ್ಲಿ ಗೊಂದಲ ಉಂಟು ಮಾಡಿ ತಮ್ಮ ತೇಜೋವಧೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ ಅವರು ತಾವು ಕರ್ಣಂಗೇರಿ ಯಲ್ಲಿ ಖರೀದಿಸಿರುವ ಭೂಮಿಯು ಅದರ ಹಿಂದಿನ ಮಾಲೀಕರಿಗೆ ಸರ್ಕಾರದಿಂದ ಮಂಜೂರಾಗಿದ್ದು ಅವರಿಂದ ತಾವು ಕಾನೂನು ಬದ್ದವಾಗೇ ಖರೀದಿಸಿದ್ದೇನೆ ಎಂದರು. ಬಹಳ ಹಿಂದೆಯೇ ಅರಣ್ಯ ಮತ್ತು ಕಂದಾಯ ಇಲಾಖೆಯು ಜಂಠಿ ಸರ್ವೆ ನಡೆಸಿ ಅರಣ್ಯವನ್ನು ವಿಂಗಡಣೆ ಮಾಡಲಾಗಿದೆ ಎಂದು ಅವರು ಹೇಳಿದರು. ಅಲ್ಲದೆ ಕೋರ್ಟಿಗೆ ತಪ್ಪು ಮಾಹಿತಿಯನ್ನು ನೀಡಿ ತಮ್ಮ ವಿರುದ್ದ ಅಪ ಪ್ರಚಾರಕ್ಕೆ ಮುಂದಾಗಿರುವವರ ವಿರುದ್ದ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲಿರುವುದಾಗಿಯೂ ತಿಳಿಸಿದರು. 2018 ರ ಚುನಾವಣಾ ಸಂದರ್ಭದಲ್ಲಿಯೂ ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ತಮ್ಮ ಮೇಲೆ ಗೂಬೆ ಕೂರಿಸಿ ಅಪಪ್ರಚಾರ ಮಾಡುವ ಯತ್ನ ನಡೆದಿತ್ತು. ಆಗ ತಾವು ತಮ್ಮ ಮನೆಗೆ ಸಂಬಂದಿಸಿದ ಎಲ್ಲಾ ದಾಖಲಾತಿಗಳನ್ನೂ ಕೋರ್ಟಿಗೆ ಸಲ್ಲಿಸಿದ ನಂತರ ಕೋರ್ಟು ಪ್ರಕರಣವನ್ನು ವಜಾ ಮಾಡಿತ್ತು ಎಂದೂ ಅವರು ಹೇಳಿದರು.
ಈ ಕುರಿತು ಮಾತನಾಡಿದ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಏ ಟಿ ಪೂವಯ್ಯ ಅವರು ಸದರಿ ಆರೋಪವು ನಿರಾಧಾರವಾಗಿದ್ದು ಅರಣ್ಯ ಭೂಮಿಯು ಯಾರಿಂದಲೂ ಒತ್ತುವರಿ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಕರ್ಣಂಗೇರಿ ಅರಣ್ಯ ಪ್ರದೇಶದ 36 ಎಕರೆ ಭೂಮಿಯನ್ನು 1933 ರಲ್ಲಿಯೇ ಅಂದಿನ ಕೂರ್ಗ್ ಹೈ ಕಮೀಷನರ್ ಅವರು ಡಿನೋಟಿಫೈ ಮಾಡಿದ್ದು ಅದರ ಕುರಿತ ಗೆಜೆಟ್ ಆದೇಶವನ್ನು ನೀಡಿದರು. ಒಟ್ಟು 36 ಎಕರೆ ಅರಣ್ಯವನ್ನು ಡಿನೋಟಿಫೈ ಮಾಡಿದ್ದು ಉಳಿದ 246.5 ಎಕರೆ ಭೂಮಿಯು ಅರಣ್ಯ ಇಲಾಖೆಯ ವಶದಲ್ಲಿಯೇ ಇದ್ದು ಸಂರಕ್ಷಣೆ ಮಾಡಲಾಗುತ್ತಿದೆ ಎಂದು ಹೇಳಿದರು.