News Kannada
Tuesday, January 31 2023

ದೆಹಲಿ

ದೆಹಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ: ‘ನಾರಿ ಶಕ್ತಿ’ ಅನಾವರಣ

delhis-republic-day-tableau-nari-shakti-unveiled
Photo Credit : News Kannada

ನವದೆಹಲಿ, ಜ. 24: ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸ್ತ್ರೀ ಸಬಲೀಕರಣವನ್ನು ಪ್ರತಿಬಿಂಬಿಸುವ ‘ನಾರಿ ಶಕ್ತಿ’ ಸ್ತಬ್ಧಚಿತ್ರವು ಸಂಪೂರ್ಣವಾಗಿ ಸಿದ್ಧಗೊಂಡಿದೆ. ನಾಡಿನ ಹೆಮ್ಮೆಯ ಪ್ರತೀಕವಾಗಿರುವ ಸ್ತಬ್ಧಚಿತ್ರವು ಜ. 26 ರಂದು ರಾಜಧಾನಿಯ ಕರ್ತವ್ಯ ಪಥದಲ್ಲಿ (ರಾಜ್‌ಪಥ್) ನಾಗುವುದರೊಂದಿಗೆ ಕರ್ನಾಟಕ ಹಿರಿಮೆಯ ಕೀರ್ತಿ ಪತಾಕೆಯನ್ನು ಹಾರಿಸಲಿದೆ. ಇದರೊಂದಿಗೆ ಸತತವಾಗಿ ಹದಿನಾಲ್ಕು ವರ್ಷಗಳಿಂದ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಂಡ ದೇಶದ ಏಕೈಕ ರಾಜ್ಯವೆಂಬ ಶ್ರೇಯವನ್ನು ಕರ್ನಾಟಕ ತನ್ನದಾಗಿಸಿಕೊಳ್ಳಲಿದೆ.

ಈ ಬಾರಿಯ ಗಣರಾಜ್ಯೋತ್ಸವದ ಸ್ತಬ್ಧಚಿತ್ರವು ಕರ್ನಾಟಕ ರಾಜ್ಯದ ಪಾಲಿಗೆ ಅತ್ಯಂತ ಸ್ಮರಣೀಯವಾದುದು. ಹಲವು ಅಡೆ ತಡೆಗಳನ್ನು ಎದುರಿಸಿ, ಕೊನೆಯ ಹಂತದಲ್ಲಿ ರಾಜ್ಯವು ಪಥ ಸಂಚಲನಕ್ಕೆ ರಹದಾರಿ ಪಡೆದುಕೊಂಡಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸ್ತಬ್ಧಚಿತ್ರವನ್ನು ಸಿದ್ಧಪಡಿಸುವ ಸವಾಲನ್ನು ಹಿಮ್ಮೆಟ್ಟಿಸಿ ಅಚ್ಚರಿಯ ರೀತಿಯಲ್ಲಿ ಸಿದ್ಧಗೊಂಡಿದೆ. ಕರ್ನಾಟಕದ ಹಿರಿಮೆ ಮತ್ತು ಕನ್ನಡ ಅಸ್ಮಿತೆಯ ಪ್ರತೀಕದಂತಿರುವ ಈ ಸ್ತಬ್ಧಚಿತ್ರವು ಕೇವಲ 10 ದಿನಗಳಲ್ಲಿ ರೂಪುಗೊಂಡಿದೆ. ಸ್ತಬ್ಧಚಿತ್ರದ ವೈಶಿಷ್ಟಪೂರ್ಣತೆಯಿಂದಲೇ ಗಮನ ಸೆಳೆಯುವ ಕರ್ನಾಟಕ ವರ್ಷದಿಂದ ವರ್ಷಕ್ಕೆ ಹೊಸ ಮೈಲಿಗಲ್ಲನ್ನು ಸ್ಥಾಪಿಸುತ್ತಲೇ ಸಾಗಿದೆ. ಈ ಬಾರಿಯದ್ದು ಅಲ್ಪಾವಧಿಯಲ್ಲಿ ಬೆರಗುಗೊಳಿಸುವಂತಹ ಐತಿಹಾಸಿಕ ಸಾಧನೆಯಂತೆ ಕಂಗೊಳಿಸುತ್ತಿದೆ.

ವಾರ್ತಾ ಇಲಾಖೆಯು ದೆಹಲಿಯ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ರಾಜ್ಯದ ಪರವಾಗಿ ಸ್ತಬ್ಧಚಿತ್ರದೊಂದಿಗೆ ಪ್ರತಿ ಬಾರಿಯೂ ಪಾಲ್ಗೊಳ್ಳುತ್ತದೆ. ಸ್ತಬ್ಧಚಿತ್ರದ ವಿಷಯದ ಆಯ್ಕೆ, ವಿನ್ಯಾಸ, ಕೇಂದ್ರದಲ್ಲಿ ಅದರ ಅನುಮೋದನೆ. ನಿರ್ಮಾಣ, ಪಾಲ್ಗೊಳ್ಳುವಿಕೆ ಹೀಗೆ ಎಲ್ಲಾ ಹಂತಗಳಲ್ಲೂ ವಾರ್ತಾ ಇಲಾಖೆಯೇ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ. ಅಲ್ಲದೆ, ಇಲಾಖೆಯು ಕಳೆದ 14 ವರ್ಷಗಳಿಂದ ನಿರಂತರವಾಗಿ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಳ್ಳುತ್ತಿದೆ. ಇದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ಸಂಗತಿ ಎಂದು ಇಂದು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಲಾಖೆಯ ಆಯುಕ್ತರಾದ ಡಾ. ಪಿ.ಎಸ್. ಹರ್ಷ, ಐಪಿಎನ್ ಅವರು ತಮ್ಮ ಹರ್ಷ ಹಂಚಿಕೊಂಡರು,

2023ರಂದು ನಡೆಯುವ ಗಣರಾಜ್ಯೋತ್ಸವದ ಸ್ತಬ್ಧಚಿತ್ರಕ್ಕಾಗಿ ಇಲಾಖೆಯು 1, ಕರ್ನಾಟಕದ ಮಹಿಳೆಯರ ಶೌರ್ಯ, 2, ರೇಷ್ಮೆ ಕರ್ನಾಟಕದ ಹೆಮ್ಮೆ 3. ಕರ್ನಾಟಕದ ಪುಷ್ಪದ್ಯಮ 4. ಕರ್ನಾಟಕ ಸಿರಿಧಾನ್ಯದ ನಾಯಕ ಮತ್ತು 5, ‘ನಾರಿ ಶಕ್ತಿ’ ಎಂಬ ಐದು ವಿಷಯಗಳನ್ನು ಆಯ್ಕೆ ಮಾಡಿಕಳುಹಿಸಿತ್ತು. ಇದರಲ್ಲಿ ಸ್ತ್ರೀ ಸಬಲೀಕರಣವನ್ನು ಬಿಂಬಿಸುವ ‘ನಾರಿ ಶಕ್ತಿ’ ವಿಷಯವನ್ನು ‘ವಿಷಯ ಆಯ್ಕೆಯ ಪರಿಣತರ ತಂಡ’ವು ಅಂತಿಮಗೊಳಿಸಿತ್ತು. ಅದಕ್ಕನುಗಣವಾಗಿ ಈ ಬಾರಿಯ ಸ್ತಬ್ಧಚಿತ್ರದಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದ ಮೂವರು ಮಹಿಳಾ ಸಾಧಕಿಯರ ಸಾಧನೆಯನ್ನು ಪ್ರದರ್ಶಿಸುತ್ತಿರುವುದಾಗಿ ಆಯುಕ್ತರು ತಿಳಿಸಿದರು.

ಆಜಾದಿ ಕ ಅಮೃತ ಮಹೋತ್ಸವ’ದ ಅಂಗವಾಗಿ ಸೂಲಗಿತ್ತಿ ನರಸಮ್ಮ ವೃಕ್ಷ ಮಾತೆ ತುಳಸಿ ಗೌಡ ಹಾಲಕ್ಕಿ ಮತ್ತು ಸಾಲುಮರದ ತಿಮ್ಮಕ್ಕ ಅವರುಗಳ ಸಾಧನೆಗಳನ್ನು ‘ನಾರಿ ಶಕ್ತಿ’ (ವುಮನ್ ಪವರ್) ಹೆಸರಿನಲ್ಲಿ ರಾಜ್ಯವು 2023ರ ಗಣರಾಜ್ಯೋತ್ಸವದ ಸ್ತಬ್ಧಚಿತ್ರದಲ್ಲಿ ಪ್ರಸ್ತುತ ಪಡಿಸಿದೆ. ಇವರುಗಳು ಸಮಾಜಕ್ಕೆ ನೀಡಿದ ನಿಸ್ವಾರ್ಥ ಕೊಡುಗೆಗಾಗಿ ಕೇಂದ್ರ ಸರ್ಕಾರ “ಪದ್ಮ ಶ್ರೀ ಪುರಸ್ಕಾರದಿಂದ ಗೌರವಿಸಿದೆ. ಕರ್ನಾಟಕದ ಅತಿ ಹಿಂದುಳಿದ ಹಳ್ಳಿಗಳಲ್ಲಿ, ಸಾಮಾನ್ಯ ಕುಟುಂಬಗಳಲ್ಲಿ ಹುಟ್ಟಿ ಬೆಳೆದರೂ ಇವರುಗಳ ಸಾಧನೆಗೆ ಅವರ ಹುಟ್ಟು – ಜಾತಿ – ಅಂತಸ್ತು ಯಾವುದು ಅಡ್ಡ ಬಂದಿಲ್ಲ. ತಮ್ಮ ಸಾಧನೆಗಳ ಮೂಲಕವೇ ಜಾಗತಿಕವಾಗಿ ಗಮನ ಸೆಳೆದವರು. ಇವರ ಸಾಧನೆಗಾಗಿ ಕರ್ನಾಟಕ ಮತ್ತು ದೇಶವೇ ಹೆಮ್ಮೆಪಡುತ್ತದೆ. ಇದನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಸ್ತಬ್ಧಚಿತ್ರವನ್ನು ರೂಪಿಸಿದೆ ಎಂದು ಅವರು ನುಡಿದರು.

ವಿಷಯ ಆಯ್ಕೆಯ ಬಳಿಕ, ಸ್ತಬ್ಧಚಿತ್ರದ ಮಾದರಿ (ಕೀ ಮಾಡಲ್) ಮತ್ತು ಸಂಗೀತದ ಹಂತವನ್ನು ದಾಟಬೇಕಾಗಿತ್ತು. ಅಂತರರಾಷ್ಟ್ರೀಯ ಖ್ಯಾತಿಯ ಕಲಾನಿರ್ದೇಶಕ ಶಶಿಧರ ಅಡಪ ಅವರು ವಿನ್ಯಾನ ಮಾಡಿಕೊಟ್ಟ ಮಾದರಿಗೆ ಅಯ್ಕೆ ನಮಿತಿ ಮೊದಲ ಹಂತದಲ್ಲೇ ಅನುಮೋದನೆ ನೀಡಿತ್ತು. ಯುವ ಸಂಗೀತ ನಿರ್ದೇಶಕ ಪ್ರವೀಣ್‌ ಡಿ, ರಾವ್ ಅವರ ‘ಕನ್ನಡ ಸಂಗೀತ’ವನ್ನು ಹಾಗೆಯೇ ಉಳಿಸಿಕೊಂಡಿತ್ತು. ಕಾರವಾರದ ಪುರುಷೋತ್ತಮ ಪಾಂಡುರಂಗ ಅವರ ನೇತೃತ್ವದ ಹಾಲಕ್ಕಿಯವರ ‘ಸುಗ್ಗಿ ಕುಣಿತ’ದ 20 ಮಂದಿಯ ಕಲಾವಿದರ ತಂಡಕ್ಕೆ ಅನುಮತಿಯೂ ಸಿಕ್ಕಿತ್ತು. ಹೀಗಾಗಿ, ರಾಜ್ಯವು ಸ್ತಬ್ಧಚಿತ್ರದ ಕಾರ್ಯದಲ್ಲಿ ತೊಡಗಿಸಿಕೊಂಡಿತ್ತು. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ ಎನ್ನುವಾಗಲೇ 2022ರ ಡಿಸೆಂಬರ್ 28ರಂದು ನಡೆದ ಕೊನೆಯ ಸುತ್ತಿನ ಸಭಾಸೂಚನಾ ಪತ್ರದಲ್ಲಿ ಕರ್ನಾಟಕ ಹೆಸರು ಸೇರ್ಪಡೆಗೊಂಡಿರಲಿಲ್ಲ.

See also  ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ ವಾದ್ರಾ

‘ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಕಳೆದ 8 ವರ್ಷಗಳಲ್ಲಿ ಭಾಗವಹಿಸುವ ಅವಕಾಶ ದೊರೆಯದ ಹಾಗೂ ಅತಿ ಕಡಿಮೆ ಬಾರಿ ಪಾಲ್ಗೊಂಡ ರಾಜ್ಯಗಳಿಗೆ ಅವಕಾಶ ನೀಡುವಂತ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರವು ಈ ಬಾರಿ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಕ್ಕೆ 2023ರ ಗಣರಾಜ್ಯೋತ್ಸದಲ್ಲಿ ಸ್ತಬ್ಧಚಿತ್ರದೊಂದಿಗೆ ಭಾಗವಹಿಸುವ ಅವಕಾಶ ದೊರತಿರಲಿಲ್ಲ’ ಎಂಬುದಾಗಿ ತಿಳಿದುಬಂದಿತ್ತು. ಆದರೂ, ಉತ್ಸಾಹ ಕಳೆದುಕೊಳ್ಳದ ಇಲಾಖೆಯು 2022ರ ಡಿಸೆಂಬರ್ 30 ರಂದು ರಕ್ಷಣಾ ಸಚಿವಾಲಯಕ್ಕೆ ಪತ್ರ ಬರೆದು ‘ಕರ್ನಾಟಕದ ನಿರಂತರ ಸಾಧನೆಯನ್ನು ಪರಿಗಣಿಸಿ’ ಈ ಬಾರಿಯೂ ಮತ್ತೊಮ್ಮೆ ಅವಕಾಶ ನೀಡುವಂತೆ ಕೋರಿತ್ತು.

ಇದಾದ 12 ದಿನಗಳ ಬಳಿಕ (2022ರ ಜನವರಿ 12) ರಕ್ಷಣಾ ಸಚಿವಾಲಯದಿಂದ ಜನವರಿ 15ರಂದು ನಡೆಯುವ ಸಭೆಯಲ್ಲಿ ಭಾಗವಹಿಸುವಂತೆ ಪತ್ರದಲ್ಲಿ ತಿಳಿಸಿತ್ತು. ರಕ್ಷಣಾ ಸಚಿವಾಲಯದ ರಾಷ್ಟ್ರೀಯ ರಂಗಶಾಲಾ ಕ್ಯಾಂಪ್‌ನಲ್ಲಿ ನಡೆದ ಕೊನೆ ಸುತ್ತಿನ ಸಭೆಯಲ್ಲಿ ಇಲಾಖೆಯು ಭಾಗವಹಿಸಿತ್ತು. ಈ ಸಭೆಯಲ್ಲಿ ರಾಜ್ಯದ ಕೀ ಮಾಡಲ್ ಮತ್ತು ಸಂಗೀತಕ್ಕೆ ಅನುಮೋದನೆ ನೀಡಿತ್ತು. ಬಳಿಕ ಜ, 16ರಂದು ಅಧಿಕೃತವಾಗಿ ಕರ್ನಾಟಕದ ಹೆಸರು ‘2023ರ ಸ್ತಬ್ಧಚಿತ್ರದ ಪಟ್ಟಿ’ಯಲ್ಲಿ ಸೇರ್ಪಡೆಗೊಂಡಿತ್ತು ಎಂದು ಪಿ.ಎಸ್. ಹರ್ಷ ಅವರು ವಿವರಿಸಿದರು.

ಹತ್ತು ದಿನಗಳಲ್ಲಿ ಸ್ತಬ್ಧಚಿತ್ರವನ್ನು ಸಿದ್ಧಪಡಿಸುವ ಬೃಹತ್ ಸವಾಲು ಎದುರಾಗಿತ್ತು. ಕರ್ನಾಟಕದ ಬಗೆಗಿನ ಅಭಿಮಾನ, ನಾಡಿನ ಹಿರಿಮ ಹಾಗೂ ಸಂಸ್ಕೃತಿಯ ಮಹತ್ವವನ್ನು ಎತ್ತಿಹಿಡಿಯುವ ಮಾನ್ಯ ಮುಖ್ಯಮಂತ್ರಿಗಳ ಪ್ರೋತ್ಸಾಹದ ನುಡಿಗಳೇ ಈ ಸವಾಲಿನ ಕೆಲಸಕ್ಕೆ ಮುನ್ನುಡಿ ಬರೆದಿತ್ತು. ಎಲ್ಲಾ ದೃಷ್ಟಿಕೋನಗಳಿಂದ ವಿಮರ್ಶಿಸಿ, ಪರಿಣತರು, ವಿಷಯ ತಜ್ಞರು, ಕಲಾನಿರ್ದೇಶಕರು ಮತ್ತು ಕಲಾವಿದರೊಂದಿಗೆ ಪರಾಮರ್ಶಿಸಿಕೊಂಡು ಇಲಾಖೆಯು ಕೆಲಸವನ್ನು ಕೈಗೆತ್ತಿಕೊಂಡಿತ್ತು. ಹಾಕಿಕೊಂಡ ಕಾರ್ಯತಂತ್ರದ ರೂಪು ರೇಷೆಗಳಂತೆ ಈ ಸ್ತಬ್ಧಚಿತ್ರ ದಿನಗಳ ಲೆಕ್ಕದಲ್ಲಿ ಮೃದಳದಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಸ್ತಬ್ಧಚಿತ್ರ ಮೂಡಿ ಬಂದಿದೆ, ಇದಕ್ಕಾಗಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೈಜೋಡಿಸಿದ ಎಲ್ಲರನ್ನೂ ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ, ಆರಂಭದಲ್ಲಿ ದೆಹಲಿಯಲ್ಲಿ ಕವಿದಿದ್ದ ದಟ್ಟ ಮಂಜಿನಂತೆ ಸವಾಲುಗಳು ಕಂಡಿದ್ದವು. ಇಂದು ಅವುಗಳೆಲ್ಲವೂ ಮಂಜಿನಂತೆ ಕರಗಿವೆ. ಸಿದ್ಧಗೊಂಡಿರುವ ಸ್ತಬ್ಧಚಿತ್ರವನ್ನು ರಾಜ್ಯದ ಪರವಾಗಿ ಪ್ರದರ್ಶಿಸಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತದೆ’ ಎಂದು ಡಾ. ಹರ್ಷ ಅವರು ತಮ್ಮ ಸಂತಸವನ್ನು ಹಂಚಿಕೊಂಡರು.

ಸ್ತಬ್ಧಚಿತ್ರದಲ್ಲಿ ಏನಿರಲಿದೆ: ಗಿಡ-ಮರ, ಬೆಟ್ಟ-ಗುಡ್ಡ, ಪಕ್ಷಿಗಳಿಂದ ಕಂಗೊಳಿಸುತ್ತಿರುವ ಸ್ತಬ್ಧಚಿತ್ರದ ಮುಂಭಾಗದಲ್ಲಿ ತೊಟ್ಟಿಲು ತೂಗುತ್ತಾ ಕೈನಲ್ಲಿ ಮಗು ಅಡಿಸುತ್ತಿರುವ ಸೂಲಗಿತ್ತಿ ನರಸಮ್ಮ ಅವರನ್ನು ತೋರಿಸಿದೆ. ನುರಿತ ವೈದ್ಯರ ಅನುಪಸ್ಥಿತಿಯಲ್ಲಿ ಸಾಂಪ್ರದಾಯಿಕವಾಗಿ ಹೆರಿಗೆಗಳನ್ನು ಮಾಡಿಸುವಲ್ಲಿ ಅವರು ಸಿದ್ಧಹಸ್ತರು, ಏಳು ದಶಕಗಳಲ್ಲಿ ಇಂತಹ ಎರಡು ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ್ದಾರೆ.

ಹಚ್ಚ ಹಸುರಿನಿಂದ ಕೂಡಿರುವ ಸ್ತಬ್ಧಚಿತ್ರದ ಮಧ್ಯಭಾಗದಲ್ಲಿ ಗಿಡ ಮರಗಳನ್ನು ಪೋಷಿಸುತ್ತಿರುವ ತುಳಸಿ ಗೌಡ ಹಾಲಕ್ಕಿ ಅವರನ್ನು ತೋರಿಸಿದ. `ವೃಕ್ಷ ಮಾತೆ” ಎಂದೇ ಹೆಸರಾಗಿರುವ ತುಳಸಿ ಅವರು ಅಪರೂಪದ ಪ್ರಭೇದದ ಸನ್ಯಗಳನ್ನು ಗುರುತಿಸಿ ಬೆಳೆಸುವಲ್ಲಿ ಪರಿಣತರು.. 30,000ಕ್ಕೂ ಹೆಚ್ಚು ಗಿಡಗಳನ್ನು ಬೆಳಸಿರುವ ಶ್ರೇಯ ಇವರದ್ದು. ಇದನ್ನು ಗಿಡಗಳ ಮಧ್ಯೆ ಕುಳಿತು ಅವುಗಳನ್ನು ಪೋಷಿಸುತ್ತಿರುವ ರೀತಿಯಲ್ಲಿ ಅವರನ್ನು ತೋರಿಸಿದೆ.

See also  ರಾಜ್ಯಸಭೆಯ ನಿವೃತ್ತ ಸದಸ್ಯರ ಅನುಭವ ರಾಷ್ಟ್ರಹಿತಕ್ಕೆ ಬಳಕೆಯಾಗಲಿ: ಪ್ರಧಾನಿ ಮೋದಿ

ಕಣ್ಣಿಗೆ ಮುದ ನೀಡುವ ಕಾಡಿನ ನಿಜಸ್ವರೂಪದಂತಿರುವ ಸ್ತಬ್ಧಚಿತ್ರದ ಕೊನೆಯ ಭಾಗದಲ್ಲಿ ರಾಜ್ಯ ಹೆದ್ದಾರಿಯ ಆಜುಬಾಜಿನಲ್ಲಿ 8000 ಮರಗಳನ್ನು ನೆಟ್ಟು ನೀರೆರೆದು ಬೆಳೆಸಿದ ನಾಲುಮರದ ತಿಮ್ಮಕ್ಕ ಅವರನ್ನು ತೋರಿಸಿದೆ. ಇದನ್ನು ಅವರು ಗಿಡಗಳಿಗೆ ನೀರೆರೆಯುತ್ತಿರುವಂತೆ ಬಿಂಬಿಸಿದೆ. ಇದಲ್ಲದೆ 75 ಆಲದ ಮರಗಳನ್ನು 4.5 ಕಿ. ಮೀ. ಉದ್ದದ ರಾಜ್ಯ ಹೆದ್ದಾರಿಯಲ್ಲಿ ಬೆಳೆಸಿದ್ದಾರೆ. ಇದನ್ನು ಸ್ತಬ್ಧಚಿತ್ರದ ಕೊನೆಯ ಭಾಗದಲ್ಲಿ ಬೃಹತ್‌ ಆಲದ ಮರದ ಮೂಲಕ ಚಿತ್ರಿಸಿದೆ.

ತೀವ್ರ ಪೈಪೋಟಿ : ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಸ್ತಬ್ಧಚಿತ್ರದೊಂದಿಗೆ ಭಾಗವಹಿಸುವುದು ಪ್ರತಿ ರಾಜ್ಯಕ್ಕೂ ಹೆಮ್ಮೆಯ ಮತ್ತು ಪ್ರತಿಷ್ಠೆಯ ಸಂಕೇತ, ಹಿಂದೆ ಎಲ್ಲಾ ರಾಜ್ಯಗಳಿಗೂ ಪಥಸಂಚಲನದಲ್ಲಿ ಭಾಗವಹಿಸಲು ಅವಕಾಶವಿತ್ತು, ಭದ್ರತೆ ಮತ್ತು ಗಣರಾಜ್ಯೋತ್ಸವದ ಅವಧಿಯಲ್ಲಿ ಮಾಡಿದ ಇಳಿಕೆ, ಪ್ರಾತಿನಿಧ್ಯತೆಯಿಂದಾಗಿ ಸ್ತಬ್ಧಚಿತ್ರಕ್ಕಾಗಿ ಪ್ರತಿನಿಧಿಸುವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆಯನ್ನು ರಕ್ಷಣಾ ಸಚಿವಾಲಯ 11ಕ್ಕೆ ಇಳಿಸಿದೆ. ಇದು ತೀವ್ರ ಪೈಪೋಟಿಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಗುಣಮಟ್ಟಕ್ಕೆ, ವಿನ್ಯಾಸಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸ್ತಬ್ಧಚಿತ್ರಕ್ಕಾಗಿ ಪ್ರಶಸ್ತಿ ಪಡೆದುಕೊಳ್ಳುವುದಕ್ಕಿಂತಲೂ ಪಥಸಂಚಲನದಲ್ಲಿ ಭಾಗವಹಿಸುವುದೇ ಪ್ರತಿಷ್ಠೆಯ ಸಂಕೇತವಾಗಿದೆ. ಇಂತಹ ಕಠಿಣ ಪರೀಕ್ಷೆಯಲ್ಲಿ ಕರ್ನಾಟಕವು ಸತತವಾಗಿ 14ನೇ ಬಾರಿಗೆ ಭಾಗಹಿಸಿದೆ. ಈ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ರಾಜ್ಯವು ಈ ಬಾರಿ ಭಾಗಹಿಸುತ್ತಿರುವುದು ಐತಿಹಾಸಿಕ ಸಂಗತಿಯಾಗಿದೆ.

ಪ್ರಶಸ್ತಿಗಳ ಸರಮಾಲೆ: 2022ರ ಸ್ತಬ್ಧಚಿತ್ರದಲ್ಲಿ ಇಲಾಖೆಯು ಪ್ರದರ್ಶಿಸಿದ್ದ ಸಾಂಪ್ರದಾಯಿಕ ಕಸೂತಿ ತೊಟ್ಟಿಲು’ಗೆ ದ್ವಿತೀಯ ಪ್ರಶಸ್ತಿ ದೊರೆತಿತ್ತು. 2015ರಲ್ಲಿ ರಾಜ್ಯವು ಚನ್ನಪಟ್ಟದ ಗೊಂಬೆಗಳನ್ನು ಪ್ರದರ್ಶಿಸಿತ್ತು, ಇದಕ್ಕೆ ತೃತೀಯ ಪ್ರಶಸ್ತಿ ದೊರೆತಿತ್ತು. 2012ರ ಗಣರಾಜ್ಯೋತ್ಸವದಲ್ಲಿ ದಕ್ಷಿಣ ಕನ್ನಡ ಭೂತಾರಾಧನೆಯ ಸ್ತಬ್ಧಚಿತ್ರಕ್ಕೆ ತೃತೀಯ ಪ್ರಶಸ್ತಿ ದೊರೆತಿತ್ತು. 2011ರಲ್ಲಿ ಬೀದರ್‌ನ ಪಾರಂಪರಿಕ ಕಲೆಯಾದ ಬಿದರಿ’ ಸ್ತಬ್ಧಚಿತ್ರಕ್ಕೆ ದ್ವಿತೀಯ ಪ್ರಶಸ್ತಿ ದೊರೆತಿತ್ತು, 2008ರಲ್ಲಿ ಹೋಯ್ಸಳ ವಾಸ್ತುಶಿಲ್ಪಕ್ಕೆ ದ್ವಿತೀಯ ಪ್ರಶಸ್ತಿ ಸಂದಿತ್ತು. 2009ರಲ್ಲಿ ಕರ್ನಾಟಕದಲ್ಲಿ ನಡೆಯಲಿದ್ದ ವೈರಾಗ್ಯ ಮೂರ್ತಿ ಬಾಹುಬಲಿಯ ಮಹಾಮಸ್ತಕಾಭಿಷೇಕದ ಸ್ತಬ್ಧಚಿತ್ರಕ್ಕೆ ಪ್ರಥಮ ಪ್ರಶಸ್ತಿ ದೊರೆತಿತ್ತು. 2008ರಲ್ಲಿ ಹೊಯ್ಸಳ ಕಲೆಯ ಸ್ತಬ್ಧಚಿತ್ರವು ದ್ವಿತೀಯ ಪ್ರಶಸ್ತಿಯ ಜೊತೆಗೆ ಅತ್ಯುತ್ತಮ ನಿರೂಪಣೆ ಮತ್ತು ಅತ್ಯುತ್ತಮ ಫ್ಯಾಬ್ರಿಕೇಷನ್‌ಗಾಗಿ ಪ್ರಶಸ್ತಿ ಲಭಿಸಿತ್ತು. ಒಂದೇ ಸ್ತಬ್ಧಚಿತ್ರಕ್ಕಾಗಿ ಮೂರು ಪ್ರಶಸ್ತಿಗಳನ್ನು ಪಡೆದಂತಹ ಅಪರೂಪದ ಸಾಧನೆಯನ್ನು ನಮ್ಮ ರಾಜ್ಯವು ಮಾಡಿದೆ ಎನ್ನುವುದು ಹೆಮ್ಮೆಯ ಸಂಗತಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು