ನವದೆಹಲಿ: ಶತಮಾನದ ದುರಂತವೆಂದು ಪರಿಗಣಿತವಾದ ಭೂಕಂಪನದಿಂದ ಜರ್ಜರಿತವಾಗಿರುವ ಟರ್ಕಿಗೆ ಭಾರತ ನೆರವಿನ ಹಸ್ತ ಚಾಚಿದ್ದು, ಈ ಕಾರಣದಿಂದ ಟರ್ಕಿ ಭಾರತವನ್ನು ದೋಸ್ತ್ ಎಂದು ಕರೆದಿದೆ. ದೋಸ್ತ್ ಎಂಬ ಪದಕ್ಕೆ ಹಿಂದಿ ಮತ್ತು ಟರ್ಕಿ ಭಾಷೆಗಳಲ್ಲಿ ಸಮಾನ ಅರ್ಥವಿದೆ ಎಂದು ದೆಹಲಿಯ ಟರ್ಕಿ ರಾಯಭಾರಿ ಫೈರಾತ್ ಸುನೇಲ್ ತಿಳಿಸಿದ್ದಾರೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭೂಕಂಪ ಪೀಡಿತ ಟರ್ಕಿಗೆ ಎನ್‌ಡಿಆರ್‌ಎಫ್‌ನ ಮೊದಲ ತಂಡವನ್ನು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಕಳುಹಿಸಿದ ನಂತರ ಟ್ವಿಟರ್‌ನಲ್ಲಿ ಈ ಹೇಳಿಕೆ ನೀಡಿದ್ದಾರೆ.
51 ಮಂದಿಯನ್ನು ಒಳಗೊಂಡ ಎನ್‌ಡಿಆರ್‌ಎಫ್ ತಂಡ ಡೆಪ್ಯುಟಿ ಕಮಾಡೆಂಟ್ ದೀಪಕ್ ತಲವಾರ್ ನೇತೃತ್ವದ ತಂಡ ಗಾಜಿಯಾಬಾದ್ ವಿಮಾನನಿಲ್ದಾಣದಿಂದ ಟರ್ಕಿಗೆ ಪ್ರಯಾಣ ಬೆಳೆಸಿದೆ. ಸೋಮವಾರ ಕೇಂದ್ರ ಸರ್ಕಾರ ಟರ್ಕಿಗೆ ನೆರವು ನೀಡುವ ಕುರಿತು ಹೇಳಿಕೆ ನೀಡಿದ್ದು, 100 ಮಂದಿಯ ಎರಡು ತಂಡ, ಶ್ವಾನ ದಳ, ಇತರ ಸಲಕರಣೆಗಳೊಂದಿಗೆ ರಕ್ಷಣಾ ಕಾರ್ಯಾಚರಣೆಗಾಗಿ ಟರ್ಕಿಗೆ ತೆರಳಲಿದೆ ಎಂದು ತಿಳಿಸಿತ್ತು.