ನವದೆಹಲಿ: ಉದ್ಯಮಿ ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಂಬಂಧದ ಬಗ್ಗೆ ಸಂಸತ್ತಿನಲ್ಲಿ ರಾಹುಲ್ ಗಾಂಧಿ ಹೇಳಿದ್ದರಲ್ಲಿ ಅಸಂಸದೀಯವಾದದ್ದೇನೂ ಇಲ್ಲ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಕಾಂಗ್ರೆಸ್ ಸಂಸದ ಗಾಂಧಿ ಅವರಿಗೆ ಹಕ್ಕು ಉಲ್ಲಂಘನೆ ನೋಟಿಸ್ ಕಳುಹಿಸಿರುವ ಕುರಿತು ಪ್ರತಿಕ್ರಿಯಿಸಿದ ಖರ್ಗೆ, ”ರಾಹುಲ್ ಗಾಂಧಿ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದೆಲ್ಲವೂ ಈಗಾಗಲೇ ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿದೆ. ಆದರೂ ನೋಟಿಸ್‌ಗೆ ಪ್ರತಿಕ್ರಿಯೆ ನೀಡುತ್ತೇವೆ ಎಂದರು. ಫೆಬ್ರವರಿ 8 ರಂದು ಲೋಕಸಭೆ ಸೆಕ್ರೆಟರಿಯೇಟ್ ರಾಹುಲ್ ಗಾಂಧಿಗೆ ನೋಟಿಸ್ ಕಳುಹಿಸಿದ್ದು, ಫೆಬ್ರವರಿ 15 ರೊಳಗೆ ಉತ್ತರಿಸಬೇಕಿದೆ.
ಫೆಬ್ರವರಿ 15 ರೊಳಗೆ ಸ್ಪೀಕರ್ ಅವರಿಗೆ ತಮ್ಮ ಹಕ್ಕುಗಳನ್ನು ಸಾಬೀತುಪಡಿಸುವ ಪುರಾವೆಗಳನ್ನು ತೋರಿಸಲು ನಾವು ನೋಟಿಸ್‌ನಲ್ಲಿ ರಾಹುಲ್ ಗಾಂಧಿಗೆ ಕೇಳಿದ್ದೇವೆ” ಎಂದು ಬಿಜೆಪಿ ಸಂಸದ ಶಶಿಕಾಂತ್ ದುಬೆ ತಿಳಿಸಿದ್ದಾರೆ. 2014 ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಉದ್ಯಮಿ ಅದಾನಿ ಆದಾಯ, ಆಸ್ತಿ ಹಠಾತ್ ಏರಿಕೆ, ಪ್ರಧಾನಿ ಅವರೊಂದಿಗಿನ ಸಂಬಂಧವನ್ನು ಗಾಂಧಿ ಪ್ರಶ್ನಿಸಿದ್ದರು.
ಲೋಕಸಭೆಯ ಸಚಿವಾಲಯದ ಮೂಲಗಳ ಪ್ರಕಾರ, ಫೆಬ್ರವರಿ 7 ರಂದು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ “ತಪ್ಪು ದಾರಿಗೆಳೆಯುವ, ಅವಹೇಳನಕಾರಿ, ಅಸಂಸದೀಯ ಮತ್ತು ದೋಷಾರೋಪಣೆಯ ಹೇಳಿಕೆಗಳನ್ನು” ನೀಡಿದ್ದಕ್ಕಾಗಿ ವಿಶೇಷ ಹಕ್ಕು ಉಲ್ಲಂಘನೆ ನೋಟಿಸ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಂದ ಪ್ರತಿಕ್ರಿಯೆ ಕೇಳಿದೆ.