ನವದೆಹಲಿ: ಬಹು ಕಾತರದಿಂದ ನಿರೀಕ್ಷಿಸುತ್ತಿದ್ದ ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಇಂದು ಪ್ರಕಟಿಸಿದೆ. ಮೇ 10ರಂದು ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಏಪ್ರಿಲ್ 13 ರಂದು ಅಧಿಸೂಚನೆ ಪ್ರಕಟವಾಗಲಿದೆ. ಏಪ್ರಿಲ್ 12 ರಂದು ನಾಮಪತ್ರ ಪರಿಶೀಲನೆ ನಡೆಸಲಾಗುವುದು, ಏಪ್ರಿಲ್ 20 ರಂದು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿರುತ್ತದೆ, ಮೇ 13 ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.
ಇಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಎಲ್ಲ ಸರಕಾರಿ ಕಾರ್ಯಕ್ರಮಗಳಿಗೆ ಕಡಿವಾಣ ಬಿದ್ದಿದೆ. ಇನ್ನು ಉದ್ಘಾಟನೆ, ಶಂಕುಸ್ಥಾಪನೆ, ಅಹವಾಲು ಸಭೆ ಮುಂತಾದವುಗಳನ್ನು ಶಾಸಕರು, ಸಚಿವರು ನಡೆಸುವಂತಿಲ್ಲ.
ಜೇನುಕುರುಬರಿಗೆ ಪ್ರತ್ಯೇಕ ಮತಗಟ್ಟೆ: ಈ ಸಂಬಂಧ ದೆಹಲಿಯ ವಿಜ್ಞಾನ ಭವನದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿದ್ದು, ಪ್ರಸ್ತುತ ಸರ್ಕಾರದ ಅವಧಿ ಮೇ 24ಕ್ಕೆ ಮುಕ್ತಾಯವಾಗಲಿದೆ. ಅದಕ್ಕೂ ಮೊದಲು ಹೊಸ ಸರ್ಕಾರ ರಚನೆ ಅಗತ್ಯವಿದೆ. 224 ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿ 5.21 ಕೋಟಿ ಮತದಾರರಿದಿದ್ದಾರೆ ಎಂದು ವಿವರಿಸಿದರು. 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಮತದಾನಕ್ಕೆ ಅವಕಾಶವಿದೆ. 58282 ಮತಗಟ್ಟೆ ಸ್ಥಾಪನೆ ಮಾಡಲಾಗುವುದು. ನಗರ ಪ್ರದೇಶದಲ್ಲಿ 24063 ಮತಗಟ್ಟೆ ಸ್ಥಾಪಿಸಲಾಗುವುದು. ಗ್ರಾಮೀಣ ಪ್ರದೇಶದಲ್ಲಿ 34219 ಮತಗಟ್ಟೆ ಗಳನ್ನು ಸ್ಥಾಪಿಸಲಾಗುವುದು ಎಂದರು. ಜೇನು ಕುರುಬ, ಕಾಡುಕುರುಬರಿಗೆ ಪ್ರತ್ಯೇಕ ಮತಗಟ್ಟೆ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಯುವಕರು ನಿರ್ವಹಿಸುವ 226 ಮತಗಟ್ಟೆ ನಿರ್ಮಿಸಲಾಗುವುದು ಎಂದರು.
ಮತದಾನ ಪ್ರಮಾಣ ಹೆಚ್ಚಳಕ್ಕೆ ಕ್ರಮ: ಕಳೆದ ಬಾರಿ ಬೆಂಗಳೂರಿನಲ್ಲಿ ಮತದಾನ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದಲ್ಲಿ ಯುವಕರು ಮತದಾನಕ್ಕೆ ನಿರಾಸಕ್ತಿ ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಮತದಾನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ. ಚುನಾವಣಾ ಆಯೋಗ ವೆಬ್‌ಸೈಟ್‌ಗಳಲ್ಲಿ ಅಭ್ಯರ್ಥಿಗಳ ವಿವರ ತಿಳಿಯಲು ಅವಕಾಶವಿದೆ. ಸಿ ವಿಜಿಲ್ ಅಪ್ಲಿಕೇಶನ್ ಮೂಲಕ ಚುನಾವಣೆ ಅಕ್ರಮದ ನಿಗಾ ವಹಿಸಲಾಗುವುದು. ಹಿಂಸೆ ರಹಿತ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರಾತ್ರಿ ಸಮಯದಲ್ಲಿ ಬ್ಯಾಂಕ್ ಎಟಿಎಂ ಹಣ ಸಾಗಾಟಕ್ಕೆ ಅವಕಾಶ ನೀಡಬಾರದು ಎಂದು ಬ್ಯಾಂಕ್ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದರು. 201 ಫ್ಳೈಯಿಂಗ್ ಸ್ಕ್ವಾಡ್ ರಚಿಸಲಾಗವುದು. 2400 ಚುನಾವಣಾ ವೀಕ್ಷಕರ ನೇಮಕ ಮಾಡಲಾಗುವುದು 19 ಜಿಲ್ಲೆಗಳಲ್ಲಿ 171 ಚೆಕ್‌ಪೋಸ್ಟ್ ನಿರ್ಮಾಣ ಮಾಡಲಾಗುವುದು ಎಂದರು.