ನವದೆಹಲಿ: ಟೆಹ್ರಾನ್ ಮೆಟ್ರೋದಲ್ಲಿ ಹಿಜಾಬ್ ಧರಿಸದವರಿಗೆ ಪ್ರವೇಶ ನಿರಾಕರಿಸಲಾಗುವುದು ಎಂದು ಇರಾನ್ ರಾಜ್ಯ ಟಿವಿ ವರದಿ ಮಾಡಿದೆ. ಈ ಕ್ರಮವು ಇರಾನಿನ ಸಾರ್ವಜನಿಕ ಸಂಸ್ಥೆಗಳು ಹಿಜಾಬ್ ಧರಿಸಲು ಒತ್ತಡ ಹೇರುವ ಸರ್ಕಾರದ ಪ್ರಯತ್ನದ ಭಾಗ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಹಿಜಾಬ್ ಇಲ್ಲದೆ ಪ್ರಯಾಣಕ್ಕೆ ಮುಂದಾದ ಮಹಿಳೆಯನ್ನು ಮೆಟ್ರೋ ಸಿಬ್ಬಂದಿ ತಡೆಯುತ್ತಿರುವ ಚಿತ್ರಗಳು ಇರಾನ್ ಟಿವಿಯಲ್ಲಿ ಪ್ರಸಾರವಾಗಿದೆ. ಈ ಬಗ್ಗೆ ಮಾತನಾಡಿದ ಟೆಹ್ರಾನ್ ಮತ್ತು ಸಬರ್ಬ್ಸ್ ಮೆಟ್ರೋ ಆಪರೇಷನ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಮಸೌದ್ ದರ್ಶಿ, ಹಿಜಾಬ್ ಧಾರಣೆ ಪಾಲನೆಗೆ ಪ್ರಧಾನ ಕಚೇರಿ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.
ಇರಾನಿನಲ್ಲಿ ಕಳೆದ ಸೆಪ್ಟಂಬರ್‌ನಿಂದ ಹಿಜಾಬ್ ವಿರೋಧ ಪ್ರತಿಭಟನೆ ತೀವ್ರವಾಗಿದೆ. ಟೆಹ್ರಾನ್, ಕರಾಜ್ ಮತ್ತು ಇತರ ನಗರಗಳಲ್ಲಿನ ಮಾಧ್ಯಮಿಕ ಶಾಲೆಗಳಲ್ಲಿ ಹಿಜಾಬ್ ಧರಿಸಲು ವಿರೋಧಿಸಿದ ವಿದ್ಯಾರ್ಥಿನಿಯರಿಗೆ ವಿಷಪ್ರಾಷಣ ಮಾಡಲಾಗಿದ ಎಂಬ ಆರೋಪಗಳು ಕೇಳಿಬಂದಿದೆ.
ನವೆಂಬರ್ ಅಂತ್ಯದಿಂದ ಅನೇಕ ಶಾಲೆಗಳಲ್ಲಿ ಬಾಲಕಿಯರು ದಿಢೀರನೇ ವಿಷ ಪ್ರಾಷನ ಪ್ರಕರಣಕ್ಕೆ ಒಳಗಾಗುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ವಿದ್ಯಾರ್ಥಿಗಳು ಮೂರ್ಛೆ ಹೋಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ತೈಲ ಸಮೃದ್ಧ ನೈಋತ್ಯ ಪ್ರಾಂತ್ಯದ ಖುಜೆಸ್ಥಾನ್‌ನ ಹಾಫ್ಟ್ಕೆಲ್ ಪಟ್ಟಣದ ಬಾಲಕಿಯರ ಶಾಲೆಯಲ್ಲಿ ಕನಿಷ್ಠ 60 ವಿದ್ಯಾರ್ಥಿನಿಯರು ವಿಷ ಪ್ರಾಷನಕ್ಕೊಳಗಾಗಿದ್ದಾರೆ ಎಂದು ಐಆರ್‌ಐಬಿ ಸರ್ಕಾರಿ ನ್ಯೂಸ್ ಏಜೆನ್ಸಿ ಹೇಳಿಕೆ ಉಲ್ಲೇಖಿಸಿ ಸ್ಥಳೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಾಯವ್ಯದ ಅರ್ದಾಬಿಲ್‌ನಲ್ಲಿರುವ ಐದು ಶಾಲೆಗಳಲ್ಲಿ ಹಲವಾರು ಶಾಲಾಮಕ್ಕಳು ವಿಷ ಸೇವಿಸಿದ್ದು, ಆತಂಕ, ಉಸಿರಾಟದ ತೊಂದರೆ ಮತ್ತು ತಲೆ ನೋವು ಕಂಡುಬಂದಿದೆ ಎಂದು ಪ್ರಾಂತೀಯ ವೈದ್ಯಕೀಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಮಾ.7 ರಂದು ಬಹಿರಂಗವಾದ ಮಾಹಿತಿ ಪ್ರಕಾರ ಇರಾನ್‌ನ 31 ಪ್ರಾಂತ್ಯಗಳ 230 ಶಾಲೆಗಳಲ್ಲಿ ಇಂತಹ ವಿಷ ಪ್ರಾಷನ ಪ್ರಕರಣ ವರದಿಯಾಗಿದ್ದು, 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಿಷ ಪ್ರಾಷನಕ್ಕೆ ಒಳಗಾಗಿದ್ದಾರೆ.