ನವದೆಹಲಿ: ಜೂನ್ 22 ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಆತಿಥ್ಯ ನೀಡಲು ಎದುರು ನೋಡುತ್ತಿರುವುದಾಗಿ ಅಮೆರಿಕದ ಆಡಳಿತ ಹೇಳಿದೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮೋದಿಯವರ ಮುಂಬರುವ ಅಧಿಕೃತ ಭೇಟಿಯ ಕುರಿತು ಕೇಳಲಾದ ಪ್ರಶ್ನೆಗೆ, ವಿದೇಶಾಂಗ ಇಲಾಖೆಯ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್ ಹೀಗೆ ಹೇಳಿದ್ದಾರೆ.
“ಈ ತಿಂಗಳ ಅಂತ್ಯದಲ್ಲಿ ಮೋದಿ ಅಮೆರಿಕಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ಮೋದಿ ಅವರ ಆತಿಥ್ಯ ನೀಡಲು ಎದುರು ನೋಡುತ್ತಿದ್ದೇವೆ. ಭಾರತದೊಂದಿಗೆ ನಮ್ಮ ಪಾಲುದಾರಿಕೆ ಅತ್ಯಂತ ಪರಿಣಾಮಕಾರಿ ಸಂಬಂಧಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.
ನಾವು ನಮ್ಮ ಆರ್ಥಿಕ ಸಂಬಂಧಗಳು ಮತ್ತು ವ್ಯಾಪಾರ ಸಮಸ್ಯೆಗಳನ್ನು ಗಾಢವಾಗಿಸಲು ಎದುರು ನೋಡುತ್ತಿದ್ದೇವೆ. ಅಮೆರಿಕ ಅಧ್ಯಕ್ಷ ಜೋ ಬಿಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರ ಆಹ್ವಾನದ ಮೇರೆಗೆ ಮೋದಿ ಭೇಟಿ ನೀಡಲಿದ್ದಾರೆ.
ಮೋದಿ ಅವರು ತಮ್ಮ ಭೇಟಿಯ ಸಂದರ್ಭದಲ್ಲಿ, ಭಾರತೀಯ ನಾಯಕನಿಗೆ ನೀಡಲಾಗುತ್ತಿರುವ ಶ್ವೇತಭವನ ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2009 ರಲ್ಲಿ ಆಗಿನ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.
ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್ನ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಲು ಯುಎಸ್ ಕಾಂಗ್ರೆಸ್ ಮೋದಿಯನ್ನು ಆಹ್ವಾನಿಸಿದೆ.