ದೆಹಲಿ: ಬಿಜೆಪಿ ಸಂಸದ ರಮೇಶ್ ಬಿಧುರಿ ಅವರು ಡ್ಯಾನಿಶ್ ಅಲಿ ಅವರನ್ನು ಗುರಿಯಾಗಿಸಿಕೊಂಡು ಮಾಡಿದ ಕಾಮೆಂಟ್‌ಗಳ ತೀವ್ರ ವಿವಾದದ ನಡುವೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶುಕ್ರವಾರ ಬಹುಜನ ಸಮಾಜ ಪಕ್ಷದ ಸಂಸದ ಡ್ಯಾನಿಶ್ ಅಲಿ ಅವರನ್ನು ಭೇಟಿ ಮಾಡಿದರು.
“ನಫ್ರತ್ ಕೆ ಬಜಾರ್ ಮೇ ಮೊಹಬ್ಬತ್ ಕಿ ದುಖಾನ್” ಎಂದು ಬಿಎಸ್ಪಿ ಸಂಸದರನ್ನು ಭೇಟಿ ಮಾಡಿದ ನಂತರ ರಾಹುಲ್ ಗಾಂಧಿ ಹೇಳಿದ್ದಾರೆ. ಗುರುವಾರ ಲೋಕಸಭೆಯಲ್ಲಿ ಮುಸ್ಲಿಂ ಸಂಸದರ ಮೇಲೆ ನಿಂದಿಸಿದ ಬಿಧುರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಒತ್ತಾಯಿಸಿದೆ. ಏತನ್ಮಧ್ಯೆ, ಡ್ಯಾನಿಶ್ ಅಲಿ ಅವರು ಬಿಧುರಿ ವಿರುದ್ಧ ವಿಶೇಷ ಹಕ್ಕು ಮಂಡಿಸಿದ್ದಾರೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಬಿಧುರಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸಂಸತ್ ತೊರೆಯುವ ಬಗ್ಗೆ ಯೋಚಿಸಬಹುದು ಎಂದು ಅಲಿ ಹೇಳಿದ್ದಾರೆ. ಅಂದಹಾಗೆ ಬಿಎಸ್ಪಿ ವಿಪಕ್ಷಗಳ ಮೈತ್ರಿಕೂಟ ಇಂಡಿಯಾದ ಭಾಗ ಅಲ್ಲ.
ನನ್ನ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ಮತ್ತು ಅವರ ಬೆಂಬಲವನ್ನು ನೀಡಲು ಅವರು ಇಲ್ಲಿಗೆ ಬಂದಿದ್ದಾರೆ. ನಾನು ಒಬ್ಬಂಟಿಯಲ್ಲ ಮತ್ತು ಪ್ರಜಾಪ್ರಭುತ್ವದೊಂದಿಗೆ ನಿಂತಿರುವ ಎಲ್ಲರೂ ನನ್ನೊಂದಿಗೆ ನಿಂತಿದ್ದಾರೆ ಎಂದು ಅವರು ಹೇಳಿದರು.