ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸರ್‌ಪ್ರೈಸ್ ಫಲಿತಾಂಶ ಕಾದಿದೆ. ಮುಂಬರುವ ಪಂಚರಾಜ್ಯ ಎಲೆಕ್ಷನ್‌ಗಳನ್ನೂ ಕಾಂಗ್ರೆಸ್ ಪಕ್ಷವೇ ಗೆಲ್ಲಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಖಾಸಗಿ ವಾಹಿನಿಯ ಸಂವಾದದಲ್ಲಿ ಭಾಗಿಯಾದ ರಾಹುಲ್ ಗಾಂಧಿ ಅವರು ರಾಜಕೀಯ ಬೆಳವಣಿಗೆಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಕಲಿತಿದ್ದು ಬಹಳ ಮುಖ್ಯವಾದ ಪಾಠ ಎಂದಿದ್ದಾರೆ.
ಹಲವಾರು ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ, ಮುಂಬರುವ 5 ರಾಜ್ಯಗಳ ಚುನಾವಣೆಯಲ್ಲಿ ಸ್ಫೋಟಕ ಫಲಿತಾಂಶ ಹೊರ ಬೀಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಪಕ್ಷ ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಚುನಾವಣೆಯನ್ನು ಗೆಲ್ಲಲಿದೆ. ರಾಜಸ್ಥಾನದಲ್ಲೂ ಕೂಡ ಗೆಲುವಿನ ಸನಿಹಕ್ಕೆ ಕಾಂಗ್ರೆಸ್ ಪಕ್ಷ ಮುನ್ನುಗ್ಗುವ ವಿಶ್ವಾಸವಿದೆ. ಬಿಜೆಪಿ ನಾಯಕರು ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದಿಲ್ಲ. ಹೆದರಿಸಿ, ಅರಾಜಕತೆಯನ್ನು ಸೃಷ್ಟಿಸುವ ಮೂಲಕ್ಕೆ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಕಿಡಿಕಾರಿದ್ದಾರೆ.