ಪಣಜಿ: ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರ ಪರವಾಗಿ ಮತದಾನ ಮಾಡಿದ ಪ್ರತಿಪಕ್ಷದ ಮೂವರು ಶಾಸಕರಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಧನ್ಯವಾದ ಅರ್ಪಿಸಿದ್ದಾರೆ.
ಗೋವಾ ವಿಧಾನಸಭೆಯಲ್ಲಿ ಎನ್ ಡಿ ಎ ಬಲ 25, ಆದರೆ ದ್ರೌಪದಿ ಮುರ್ಮು ಪಡೆದ ಮತಗಳು 28 ಎಂದು ಸಾವಂತ್ ಹೇಳಿದರು. ಎನ್ ಡಿ ಎ ರಾಷ್ಟ್ರಪತಿ ಅಭ್ಯರ್ಥಿಯನ್ನು ಬೆಂಬಲಿಸಿದ ಗೋವಾದ ಎಲ್ಲಾ ಶಾಸಕರು ಮತ್ತು ಸಂಸದರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಸಾವಂತ್ ಹೇಳಿದರು.
“ನಮ್ಮ ಶಾಸಕರೊಂದಿಗೆ, ದ್ರೌಪದಿ ಮುರ್ಮು ಅವರ ಬೆಂಬಲಕ್ಕೆ ಮತ ಚಲಾಯಿಸಿದ ಪ್ರತಿಪಕ್ಷದ ಮೂವರು ಶಾಸಕರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ಎಸ್ಟಿ ಸಮುದಾಯದ ವ್ಯಕ್ತಿಯೊಬ್ಬರು ಉನ್ನತ ಹುದ್ದೆಯನ್ನು ತಲುಪಿರುವುದು ಎಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ. ನನಗೆ ತುಂಬಾ ಸಂತೋಷವಾಗಿದೆ” ಎಂದು ಸಾವಂತ್ ಹೇಳಿದ್ದಾರೆ.
ಎನ್ ಡಿ ಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಗೋವಾದ ಶಾಸಕರ 25 ಕ್ಕೂ ಹೆಚ್ಚು ಮತಗಳನ್ನು ಪಡೆಯಲಿದ್ದಾರೆ ಎಂದು ಸಾವಂತ್ ರಾಷ್ಟ್ರಪತಿ ಚುನಾವಣೆಗೆ ಮೊದಲು ಹೇಳಿದ್ದರು.
ಬಿಜೆಪಿ 20 ಶಾಸಕರನ್ನು ಹೊಂದಿದ್ದು, ಇಬ್ಬರು ಎಂಜಿಪಿ ಮತ್ತು ಮೂವರು ಪಕ್ಷೇತರ ಶಾಸಕರೊಂದಿಗೆ ಒಟ್ಟು 25 ಶಾಸಕರ ಬಲವಿದೆ.
ಪ್ರತಿಪಕ್ಷ ಕಾಂಗ್ರೆಸ್ 11, ಎಎಪಿ 2, ಗೋವಾ ಫಾರ್ವರ್ಡ್ 1 ಮತ್ತು ಆರ್ಜಿ ಪಕ್ಷವು ಗೋವಾ ವಿಧಾನಸಭೆಯಲ್ಲಿ 1 ಸದಸ್ಯರನ್ನು ಹೊಂದಿದೆ, ಹೀಗಾಗಿ ಪ್ರತಿಪಕ್ಷಗಳ ಬಲವು 15 ಶಾಸಕರನ್ನು ಹೊಂದಿದೆ.