ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಗೆದ್ದರೆ ರಾಜ್ಯದ ಹಿರಿಯ ನಾಗರಿಕರಿಗೆ ಅಯೋಧ್ಯೆ ಸೇರಿದಂತೆ ಹಲವಾರು ಧಾರ್ಮಿಕ ಕ್ಷೇತ್ರಗಳಿಗೆ ಉಚಿತ ತೀರ್ಥಯಾತ್ರೆ ಕಲ್ಪಿಸುವುದಾಗಿ ಆಮ್ ಆದ್ಮಿ ಪಕ್ಷದ ಸಂಚಾಲಕ ಮತ್ತು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
ರಾಜ್ಕೋಟ್ ನಗರದಲ್ಲಿ ರ್ಯಾಲಿಯಲ್ಲಿ ಭಾಗವಹಿಸಿದ್ದ ಕೇಜ್ರಿವಾಲ್, ಮೂರು ದಶಕಗಳಿಂದ ಅಧಿಕಾರದಲ್ಲಿರುವ ಬಿಜೆಪಿಯು ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಎಎಪಿ ಪರ ಮತ ಚಲಾಯಿಸಿ ಗೆಲ್ಲುವಂತೆ ಮಾಡಿದರೆ ಉಚಿತ ವಿದ್ಯುತ್, ಉತ್ತಮ ಶಾಲೆಗಳು ಮತ್ತು ಸುಸಜ್ಜಿತ ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಕೇಜ್ರಿವಾಲ್ ಘೋಷಿಸಿದ್ದಾರೆ.
‘ಗುಜರಾತ್ನಲ್ಲಿ ಕಳೆದ 27 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಓರ್ವ ವ್ಯಕ್ತಿಯನ್ನೂ ತೀರ್ಥಯಾತ್ರೆಗೆ ಕಳುಹಿಸಿಲ್ಲ. ದೆಹಲಿಯಿಂದ ಮೂರು ವರ್ಷಗಳಲ್ಲಿ 50,000 ಮಂದಿಯನ್ನು ತೀರ್ಥಯಾತ್ರೆಗೆ ಕಳುಹಿಸಿದ್ದೇವೆ. ನಮ್ಮ ಪಕ್ಷಕ್ಕೆ ಮತ ಚಲಾಯಿಸಿದರೆ ಪ್ರತಿಯೊಬ್ಬ ಹಿರಿಯ ನಾಗರಿಕನನ್ನು ಉಚಿತವಾಗಿ ಧಾರ್ಮಿಕ ಕ್ಷೇತ್ರಗಳಿಗೆ ತೀರ್ಥಯಾತ್ರೆಗೆ ಕರೆದೊಯ್ಯುತ್ತೇವೆ’ ಎಂದು ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
‘ಎಎಪಿ ಪಕ್ಷವು ವಿದ್ಯಾವಂತ, ಪ್ರಾಮಾಣಿಕ ಮತ್ತು ದೇಶಭಕ್ತಿಯಿರುವ ಪಕ್ಷವಾಗಿದೆ. ಕನಿಷ್ಠ ಬಿಜೆಪಿಯ ಅಹಂಕಾರವನ್ನು ಮುರಿಯಲಾದರೂ ಎಎಪಿಗೆ ಒಂದು ಅವಕಾಶವನ್ನು ಕೊಡುವಂತೆ ಮತದಾರರಿಗೆ ಒತ್ತಾಯ ಮಾಡುತ್ತಿದ್ದೇನೆ. ನಾವು ತೃಪ್ತಿದಾಯಕ ಕೆಲಸ ಮಾಡದಿದ್ದರೆ ಬೇರೆ ಪಕ್ಷವನ್ನು ಆಯ್ದುಕೊಳ್ಳಲು ನೀವು ಸ್ವತಂತ್ರರು’ ಎಂದು ಕೇಜ್ರಿವಾಲ್ ಹೇಳಿದ್ದಾರೆ. ವರ್ಷಾಂತ್ಯಕ್ಕೆ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದೆ.