ಶ್ರೀನಗರ: ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿರುವ ಕ್ರಿಕೆಟ್ ಹಗರಣದ ದೂರಿನಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಡಾ.ಫಾರೂಕ್ ಅಬ್ದುಲ್ಲಾ ಮತ್ತು ಇತರರಿಗೆ ಶ್ರೀನಗರ ನ್ಯಾಯಾಲಯ ಶನಿವಾರ ಸಮನ್ಸ್ ಜಾರಿ ಮಾಡಿದೆ.
ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ (ಜೆಕೆಸಿಎ) ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅಬ್ದುಲ್ಲಾ ಮತ್ತು ಇತರರ ವಿರುದ್ಧ ಇ.ಡಿ ಸಲ್ಲಿಸಿದ ದೂರನ್ನು ಪರಿಗಣಿಸಿದ ಶ್ರೀನಗರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಆಗಸ್ಟ್ 27 ಕ್ಕೆ ಸಮನ್ಸ್ ಜಾರಿ ಮಾಡಿದ್ದಾರೆ.
ಸಮನ್ಸ್ ನೀಡುವ ಮೊದಲು, ನ್ಯಾಯಾಲಯವು ಇಡಿಯನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ತಾಹಿರ್ ಮಜೀದ್ ಶಮ್ಸಿ ಅವರ ಮಾತುಗಳನ್ನು ಆಲಿಸಿ, ಇ.ಡಿ.ಯಿಂದ ಹಾಜರುಪಡಿಸಿದ ದಾಖಲೆಗಳನ್ನು ಪರಿಶೀಲಿಸಿತು.
ಮೇ ೩೧ ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ಲಾ ಅವರನ್ನು ಇಡಿ ೩ ಗಂಟೆಗಳ ಕಾಲ ವಿಚಾರಣೆ ನಡೆಸಿತು.
ಜೆಕೆಸಿಎ ನಿಯಮಿತ ಖಾತೆಯನ್ನು ಹೊಂದಿದ್ದರೂ, ಹಣ ಇಡಲು ಆರು ಹೊಸ ಖಾತೆಗಳನ್ನು ತೆರೆಯಲಾಗಿದೆ ಮತ್ತು ಅಂತಿಮವಾಗಿ ಅವುಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಇಡಿ ಆರೋಪಿಸಿದೆ.