ತಿರುವನಂತಪುರಂ: ಅಲಪ್ಪುಳ ಬಳಿ ಸೋಮವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಸ್ರೋ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಐವರು ಯುವಕರು ಸಾವನ್ನಪ್ಪಿದ್ದಾರೆ.
ಮೂಲಗಳ ಪ್ರಕಾರ, 24 ರಿಂದ 30 ವರ್ಷ ವಯಸ್ಸಿನ ಯುವಕರನ್ನು ಕರೆದೊಯ್ಯುತ್ತಿದ್ದ ಕಾರು ಭಾರಿ ವಾಹನಕ್ಕೆ ಡಿಕ್ಕಿ ಹೊಡೆದಾಗ ಈ ಘಟನೆ ನಡೆದಿದೆ.
ಅವರಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದರು.
ಅಂಬಲಪುಳ ಮೇಲ್ಸೇತುವೆಯಲ್ಲಿ ಪ್ರಯಾಣಿಕರನ್ನು ಹೊರತೆಗೆಯಲು ಸ್ಥಳೀಯರು, ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಕಾರನ್ನು ಕತ್ತರಿಸಬೇಕಾಯಿತು.
ಮಾಹಿತಿಯ ಪ್ರಕಾರ, ಈಗ ನಿಧನರಾದ ಯುವಕರು ಇಲ್ಲಿನ ಇಸ್ರೋ ಘಟಕದ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ದೇವಾಲಯದ ಉತ್ಸವದಲ್ಲಿ ಭಾಗವಹಿಸಲು ಅಲಪ್ಪುಳಕ್ಕೆ (ಅವರಲ್ಲಿ ಒಬ್ಬರ ತವರು ಪಟ್ಟಣ) ತೆರಳುತ್ತಿದ್ದರು. ಉಳಿದ ನಾಲ್ವರು ರಾಜಧಾನಿ ಜಿಲ್ಲೆಯವರು.
ಮೃತರನ್ನು ಪ್ರಸಾದ್, ಮನು, ಅಮಲ್, ಸುಮೋದ್ ಮತ್ತು ಶಿಜಿನ್ ದಾಸ್ ಎಂದು ಗುರುತಿಸಲಾಗಿದೆ.