ತಿರುವನಂತಪುರಂ: ಜೀವಂತ ಆನೆ ಅಥವಾ ಯಾವುದೇ ಪ್ರಾಣಿಗಳನ್ನು ಎಂದಿಗೂ ದೇವಳದಲ್ಲಿ ಟ್ಟುಕೊಳ್ಳುವುದಿಲ್ಲ ಅಥವಾ ಬಾಡಿಗೆಗೆ ನೀಡುವುದಿಲ್ಲ ಎಂಬ ಪ್ರತಿಜ್ಞೆಯನ್ನು ಅನುಸರಿಸಿ, ಕೇರಳದ ತ್ರಿಶೂರ್ ಜಿಲ್ಲೆಯ ಇರಿಂಜಡಪಿಲ್ಲಿ ಶ್ರೀ ಕೃಷ್ಣ ದೇವಾಲಯವು ದೇವಾಲಯದ ಆಚರಣೆಗಳಿಗೆ ಯಾಂತ್ರಿಕ, ಆನೆಯನ್ನು ಬಳಸಿದ ದೇಶದ ಮೊದಲ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾನುವಾರ, ದೇವಾಲಯದ ಅರ್ಚಕರು ಇರಿಂಜಡಪಿಲ್ಲಿ ರಾಮನ್ ಎಂಬ ಭವ್ಯವಾದ, ಜೀವಂತ ಯಾಂತ್ರಿಕ ಅಥವಾ “ರೊಬೊಟಿಕ್” ಆನೆಗೆ ‘ನಾದಾಯಿರುಥಲ್’ ಅಥವಾ ಔಪಚಾರಿಕ ಅರ್ಪಣೆಯನ್ನು ನೆರವೇರಿಸಿದರು.
ಪ್ರಾಣಿ ಹಕ್ಕುಗಳ ಸಂಸ್ಥೆ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೇಟಾ) ಇಂಡಿಯಾ ಪ್ರಶಸ್ತಿ ವಿಜೇತ ಭಾರತೀಯ ಚಲನಚಿತ್ರ ನಟಿ ಪಾರ್ವತಿ ತಿರುವೋತು ಅವರ ಬೆಂಬಲದೊಂದಿಗೆ ಇರಿಂಜಡಪಿಲ್ಲಿ ರಾಮನ್ ಅನ್ನು ದೇವಾಲಯಕ್ಕೆ ಉಡುಗೊರೆಯಾಗಿ ನೀಡಿದೆ.
‘ಇರಿಂಜಡಪಿಲ್ಲಿ ರಾಮನ್’ ದೇವಾಲಯದಲ್ಲಿ ಸಮಾರಂಭಗಳನ್ನು ಸುರಕ್ಷಿತ ಮತ್ತು ಕ್ರೌರ್ಯ ಮುಕ್ತ ರೀತಿಯಲ್ಲಿ ನಡೆಸಲು ಸಹಾಯ ಮಾಡುತ್ತದೆ ಮತ್ತು ಆ ಮೂಲಕ ನಿಜವಾದ ಆನೆಗಳ ಪುನರ್ವಸತಿ ಮತ್ತು ಕಾಡುಗಳಲ್ಲಿನ ಜೀವನವನ್ನು ಬೆಂಬಲಿಸುತ್ತದೆ ಎಂದು ಪೇಟಾ ಇಂಡಿಯಾ ಹೇಳಿದೆ.
ಭಾನುವಾರ ನಡೆದ ಉದ್ಘಾಟನಾ ಸಮಾರಂಭದ ನಂತರ ಪೆರುವನಮ್ ಸತೀಶನ್ ಮರಾರ್ ನೇತೃತ್ವದ ತಾಳವಾದ್ಯ ತಂಡದ ಪ್ರದರ್ಶನ ನಡೆಯಿತು.
ಪ್ರಾಣಿಗಳಿಗೆ ಗೌರವಯುತ ಮತ್ತು ಘನತೆಯ ಜೀವನವನ್ನು ನಡೆಸಲು ಅವಕಾಶ ನೀಡುವ ನಿಟ್ಟಿನಲ್ಲಿ ನಾವು ಪರಿಣಾಮಕಾರಿ ಹೆಜ್ಜೆಗಳನ್ನು ಇಡುವ ಸಮಯ ಬಂದಿದೆ” ಎಂದು ನಟಿ ಪಾರ್ವತಿ ಹೇಳಿದರು.
ದೇವಾಲಯದ ಪ್ರಧಾನ ಅರ್ಚಕ ರಾಜ್ಕುಮಾರ್ ನಂಬೂದಿರಿ ಮಾತನಾಡಿ, “ನಮ್ಮ ಆಚರಣೆಗಳು ಮತ್ತು ಹಬ್ಬಗಳನ್ನು ಕ್ರೌರ್ಯ ಮುಕ್ತ ರೀತಿಯಲ್ಲಿ ನಡೆಸಲು ಸಹಾಯ ಮಾಡುವ ಈ ಯಾಂತ್ರಿಕ ಆನೆಯನ್ನು ಸ್ವೀಕರಿಸಲು ನಾವು ತುಂಬಾ ಸಂತೋಷಪಡುತ್ತೇವೆ ಮತ್ತು ಕೃತಜ್ಞರಾಗಿರುತ್ತೇವೆ, ಮತ್ತು ಇತರ ದೇವಾಲಯಗಳು ಸಹ ಆಚರಣೆಗಳಿಗಾಗಿ ಜೀವಂತ ಆನೆಗಳನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತವೆ ಎಂದು ನಾವು ಭಾವಿಸುತ್ತೇವೆ” ಎಂದು ಹೇಳಿದರು.
ಕೇರಳ ಸೇರಿದಂತೆ ದೇಶದಲ್ಲಿ ಆನೆಗಳನ್ನು ಅಕ್ರಮವಾಗಿ ಅನುಮತಿಯಿಲ್ಲದೆ ಬೇರೆ ರಾಜ್ಯಕ್ಕೆ ಸಾಗಿಸಲಾಗುತ್ತಿದೆ. ಆನೆಗಳನ್ನು ಕಠಿಣ ಶಿಕ್ಷೆ, ಹೊಡೆತ ಮತ್ತು ಲೋಹದ ಕೊಕ್ಕೆಯೊಂದಿಗೆ ಆಯುಧಗಳ ಬಳಕೆಯ ಮೂಲಕ ತರಬೇತಿ ನೀಡಲಾಗುತ್ತದೆ ಮತ್ತು ನಿಯಂತ್ರಿಸಲಾಗುತ್ತದೆ. ಈ ಸಂದರ್ಭ ಸೆರೆವಾಸದ ಹತಾಶೆಯು ಆನೆಗಳು ಅಸಹಜ ನಡವಳಿಕೆಯನ್ನು ಪ್ರದರ್ಶಿಸಲು ಕಾರಣವಾಗುತ್ತದೆ. ಹತಾಶೆಗೊಂಡ ಆನೆಗಳು ಆಕ್ರಮಣಕಾರಿ ವರ್ತನೆ ತೋರಿ ಜೀವ ಮತ್ತು ಆಸ್ತಿಪಾಸ್ತಿ ಹಾನಿಗೆ ಕಾರಣವಾಗುತ್ತದೆ.
ಹೆರಿಟೇಜ್ ಅನಿಮಲ್ ಟಾಸ್ಕ್ ಫೋರ್ಸ್ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, 15 ವರ್ಷಗಳ ಅವಧಿಯಲ್ಲಿ ಕೇರಳದಲ್ಲಿ ಸೆರೆಹಿಡಿದ ಆನೆಗಳು 526 ಜನರನ್ನು ಕೊಂದಿವೆ.