ತಿರುವನಂತಪುರಂ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಎ.ಕೆ ಅವರ ಪುತ್ರ ಅನಿಲ್ ಕೆ. ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವ ಆಂಟನಿ, ರಾಷ್ಟ್ರೀಯತೆಯ ಅಜೆಂಡಾ ಅನುಸರಿಸುತ್ತಿರುವ ಬಿಜೆಪಿಗೆ ಭವಿಷ್ಯದಲ್ಲಿ ಹೆಚ್ಚು ಹೆಚ್ಚು ಯುವಕರು ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಿಂದ ಎಂಎಸ್ ಪದವಿ ಪಡೆದಿರುವ ಅನಿಲ್ ಆಂಟೋನಿ ಅವರು ಕಾಂಗ್ರೆಸ್ ಪಕ್ಷದ ಮಾಧ್ಯಮ ವಿಭಾಗದ ಮುಖಸ್ಥರಾಗಿದ್ದರು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಅನಿಲ್ ಆಂಟೋನಿ ಐಎಎನ್‌ಎಸ್ ನೊಂದಿಗಿನ ಸಂದರ್ಶನದಲ್ಲಿ ತಮ್ಮ ಅನಿಸಿಕೆ ಭವಿಷ್ಯದ ಯೋಜನೆಗಳ ಕುರಿತು ಮಾತನಾಡಿದ್ದಾರೆ. ಅದರ ವಿವರ ಇಲ್ಲಿದೆ.
ಐಎಎನ್‌ಎಸ್: ನೀವು ಬಿಜೆಪಿ ಸೇರಲು ಕಾರಣವೇನು ?
ಆಂಟನಿ: ನನ್ನ ತಂದೆ ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದು, ಕಳೆದ 65 ವರ್ಷಗಳಿಂದ ಪಕ್ಷದಲ್ಲಿದ್ದಾರೆ. ನನ್ನ ತಾಯಿ ಮತ್ತು ನನ್ನ ಸಹೋದರ ಕೂಡ ಕಾಂಗ್ರೆಸ್‌ನಲ್ಲಿದ್ದಾರೆ. ನಾನು ಹಲವಾರು ವರ್ಷಗಳಿಂದ ಕಾಂಗ್ರೆಸ್ಸಿಗನಾಗಿದ್ದೆ ಮತ್ತು ಪಕ್ಷದ ಐಟಿ ಸೆಲ್‌ನಲ್ಲಿದ್ದೆ. ಆದರೆ ಇತ್ತೀಚೆಗೆ ಕಾಂಗ್ರೆಸ್‌ನಲ್ಲಿ ಹಲವು ಬದಲಾವಣೆಗಳಾಗಿದ್ದು, ಈಗಿನ ಕಾಂಗ್ರೆಸ್‌ಗೆ ಹಿಂದಿನ ಮೌಲ್ಯಗಳಿಲ್ಲ ಹಾಗಾಗಿ ಬಿಜೆಪಿ ಸೇರಿದ್ದೇನೆ. ಬಿಜೆಪಿ ರಾಷ್ಟ್ರೀಯವಾದಿ ಧೋರಣೆಯನ್ನು ಹೊಂದಿರುವ ಏಕೈಕ ರಾಜಕೀಯ ಪಕ್ಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಂಡವು ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದೆ. ಹೀಗಾಗಿ ಎಲ್ಲಾ ಕ್ಷೇತ್ರಗಳಲ್ಲಿ ದೇಶದ ಪ್ರಗತಿಯನ್ನು ಸ್ಪಷ್ಟವಾಗಿ ಕಾಣಬಹುದು. ನಾನು ಬಿಜೆಪಿಗೆ ಸೇರ್ಪಡೆಗೊಂಡಿರುವುದು ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸುವ ಹೊರತು ಬೇರೇನೂ ಅಲ್ಲ.
ಐಎಎನ್‌ಎಸ್: ನೀವು ಬಿಜೆಪಿ ಸೇರ್ಪಡೆಗೊಂಡಿರುವುದಕ್ಕೆ ಕಾಂಗ್ರೆಸ್ , ಸಿಪಿಎಂ ಟೀಕಿಸುತ್ತಿವೆ ಇದಕ್ಕೇನು ಹೇಳುತ್ತೀರಿ
ಆಂಟನಿ: ಕಾಂಗ್ರೆಸ್ ಮತ್ತು ಸಿಪಿಐ-ಎಂನಿಂದ ಇಂತಹ ಟೀಕೆ ಸಾಮಾನ್ಯ. ವಾಕ್ ಸ್ವಾತಂತ್ರ್ಯವಿರುವ ದೇಶದಲ್ಲಿ ಯಾರು ಬೇಕಾದರೂ ತಮ್ಮ ಟೀಕೆಗಳನ್ನು ವ್ಯಕ್ತಪಡಿಸಬಹುದು. ಆದರೆ ಅದು ಮಿತಿಯಲ್ಲಿರಬೇಕು.
ಐಎಎನ್‌ಎಸ್: ನಿಮಗೆ ಬಿಜೆಪಿ ಸ್ಥಾನಮಾನದ ಭರವಸೆ ನೀಡಿದೆಯೇ?
ಆಂಟನಿ: ನಾನು ಯಾವುದೇ ಪೂರ್ವ ಷರತ್ತುಗಳಿಲ್ಲದೆ ಏಕಪಕ್ಷೀಯವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ, ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಬಯಸುವ ವ್ಯಕ್ತಿ ಮತ್ತು ನಾನು ನಿಮಗೆ ಮೊದಲೇ ಹೇಳಿದಂತೆ, ನಾನು ಯಾವುದೇ ಸ್ಥಾನಗಳನ್ನು ಕೇಳಿಲ್ಲ ಮತ್ತು ಪಕ್ಷವು ನನಗೆ ಅಂತಹ ಯಾವುದೇ ಆಶ್ವಾಸನೆ ನೀಡಿಲ್ಲ.
ಐಎಎನ್‌ಎಸ್: ನೀವು ಪ್ರಸಿದ್ಧ ಸ್ಟ್ಯಾನ್‌ಫೋರ್ಡ್ ಮತ್ತು ಎಂಐಟಿ ಹಳೆಯ ವಿದ್ಯಾರ್ಥಿ. ಬಿಜೆಪಿ ಸೇರಲು ನಿಮ್ಮ ಪ್ರೇರಣೆ ಏನು?
ಆಂಟನಿ: ಬಿಜೆಪಿ ರಾಷ್ಟ್ರ ನಿರ್ಮಾಣ ಮತ್ತು ಯುವ ನಾಯಕರು ಮತ್ತು ತಂತ್ರಜ್ಞರಿಗೆ ಸಮಾನ ಅವಕಾಶಗಳನ್ನು ಒದಗಿಸುವ ರಾಜಕೀಯ ಪಕ್ಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಂತ್ರಜ್ಞಾನದ ಮೂಲಕ ರಾಷ್ಟ್ರದ ಅಭಿವೃದ್ಧಿಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ . ಭಾರತದ ಯುಪಿಐ ಪಾವತಿ ಗೇಟ್‌ವೇಯುನ್ನು ಈಗ ಇತರ ದೇಶಗಳಲ್ಲಿ ಅನುಕರಿಸಲಾಗುತ್ತಿದೆ. ಕೋವಿಡ್ ದಿನಗಳಲ್ಲಿ, ನಮ್ಮ ದೇಶದ ಕೋವಿನ್ ಪೋರ್ಟಲ್ ಅನ್ನು ಮತ್ತೆ ಇತರ ದೇಶಗಳು ಮಾದರಿಯಾಗಿ ನೋಡಿವೆ. ನಮ್ಮ ಆಧಾರ್ ಕಾರ್ಡ್ ವಿಶ್ವಮಾನ್ಯತೆ ಪಡೆದಿದೆ. ಈ ನಿಟ್ಟಿನಲ್ಲಿ ಪ್ರಧಾನಿಯವರ ಯೋಚನೆ ಯೋಜನೆ ನನಗೆ ಮಾದರಿಯಾಗಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ಸೇರಿದ್ದೇನೆ.
ಐಎಎನ್‌ಎಸ್: ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್ ಅಲ್ಪಸಂಖ್ಯಾತರ ವಿರುದ್ಧ ಆಗಾಗ್ಗೆ ನೀಡುವ ಹೇಳಿಕೆ ಟೀಕೆಗೊಳಗಾಗಿದೆ. ಅಂತಹ ಸಿದ್ಧಾಂತ ಬೆಂಬಲಿಸಲು ನಿಮಗೆ ಯಾವುದೇ ಸಮಸ್ಯೆ ಇಲ್ಲವೇ?
ಆಂಟನಿ: ಇದು ತಪ್ಪು ಕಲ್ಪನೆ. ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯದವರೇ ಹೆಚ್ಚಾಗಿರುವ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಅಥವಾ ಎನ್ ಡಿಎ ಮಿತ್ರಪಕ್ಷಗಳು ಅಧಿಕಾರದಲ್ಲಿದ್ದು, ಈ ರಾಜ್ಯಗಳಲ್ಲಿ ಅಪಾರ ಅಭಿವೃದ್ಧಿ ಕಾಣುತ್ತಿದೆ. ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ಜನರು ಈ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಿಜೆಪಿ ಮತ್ತು ಎನ್‌ಡಿಎಯಲ್ಲಿನ ಅದರ ಮಿತ್ರಪಕ್ಷಗಳಿಗೆ ಮತ ಹಾಕಿದ್ದಾರೆ.
ಬಿಜೆಪಿಯು ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಸಾಧಿಸಿದ್ದರೆ, ಈ ರಾಜ್ಯಗಳ ಜನರು ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆಯೇ? ಇದರರ್ಥ ಬಿಜೆಪಿ ವಿರುದ್ಧ ಉದ್ದೇಶಪೂರ್ವಕ ಅಪಪ್ರಚಾರವನ್ನು ಮಾಡಲಾಗುತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ಸುರಕ್ಷಿತವಾಗಿದೆ ಎಂದು ನಾನು ಭಾವಿಸುತ್ತೇನೆ. ಗೋವಾದಲ್ಲಿ ಕ್ರಿಶ್ಚಿಯನ್ನರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಟೀಕೆಗಳು ಬಿಜೆಪಿ ಬೆಳವಣಿಗೆಯನ್ನು ಕಟ್ಟಿಹಾಕಲು ಮಾಡುತ್ತಿರುವ ದುರದೇಶ ಪೂರಿತ ಅಭಿಯಾನದ ಭಾಗ.
ಐಎಎನ್‌ಎಸ್: ನಿಮ್ಮ ಕಿರಿಯ ಸಹೋದರ ಅಜಿತ್ ಆಂಟೋನಿ ಅವರು ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು, ನಿಮ್ಮನ್ನು ಕಾಂಗ್ರೆಸ್‌ಗೆ ಮರಳುವಂತೆ ಮನವಿ ಮಾಡಿದ್ದಾರೆ ಇದಕ್ಕೇನು ಹೇಳುತ್ತೀರಿ.
ಆಂಟನಿ: ಅಜಿತ್ ಮತ್ತು ನಾನು ಸಹೋದರರು ಮತ್ತು ನಾವು ಪರಸ್ಪರ ಪ್ರೀತಿಸುತ್ತೇವೆ. ಆದರೆ ನನ್ನ ರಾಜಕೀಯ ಸಿದ್ಧಾಂತ ಬೇರೆಯಾಗಿದೆ. ಹಲವು ಬಾರಿ ಚಿಂತಿಸಿ ಬಿಜೆಪಿ ಸೇರುವ ನಿರ್ಧಾರ ಕೈಗೊಂಡಿದ್ದೇನೆ. ನಾನು ನಿಮಗೆ ಮೊದಲೇ ಹೇಳಿದಂತೆ, ಪ್ರಸ್ತುತ ದೇಶದಲ್ಲಿ ರಾಷ್ಟ್ರ ನಿರ್ಮಾಣ ಪ್ರಕ್ರಿಯೆಗಾಗಿ ಕೆಲಸ ಮಾಡುತ್ತಿರುವ ಬಿಜೆಪಿ ಸೇರಿದ್ದೇನೆ.
ಐಎಎನ್‌ಎಸ್: ಈಗಿನ ಕಾಂಗ್ರೆಸ್ ಹಳೆಯ ಕಾಲದ ಕಾಂಗ್ರೆಸ್ ಅಲ್ಲ ಎಂದು ನೀವು ಹೇಳಿದ್ದೀರಿ, ಅದರ ಅರ್ಥವೇನು?
ಆಂಟನಿ: ಹಿಂದಿನ ಕಾಂಗ್ರೆಸ್ ಹಲವು ಗುಣಗಳನ್ನು ಹೊಂದಿದ್ದು ಇಪ್ಪತ್ತೈದು ವರ್ಷಗಳ ಹಿಂದಿನ ಕಾಂಗ್ರೆಸ್ ಆಗಿರಬಹುದು ಅಥವಾ ಐದು ವರ್ಷಗಳ ಹಿಂದಿನ ಕಾಂಗ್ರೆಸ್ ಆಗಿರಬಹುದು. ಈಗಿನ ಕಾಂಗ್ರೆಸ್ ಕೇವಲ ಕೆಲವು ವ್ಯಕ್ತಿಗಳಿಗೆ ಸೀಮಿತವಾಗಿದೆ. ಇಂದು ಕಾಂಗ್ರೆಸ್‌ಗೆ ದೇಶದ ಹಿತಾಸಕ್ತಿ ಮುಖ್ಯವಲ್ಲ. ಕಾಂಗ್ರೆಸ್ ನಾಯಕರು ತಮಗೆ ಏನು ತಪ್ಪಾಗಿದೆ ಎಂದು ಆತ್ಮಾವಲೋಕನ ಮಾಡಿಕೊಂಡರೆ ಒಳ್ಳೆಯದು. ಗುಲಾಂ ನಬಿ ಆಜಾದ್ ಅವರಂತಹ ಹಿರಿಯ ನಾಯಕರು ಪಕ್ಷ ತೊರೆದಿದ್ದು ಏಕೆ, ಜ್ಯೋತಿರಾದಿತ್ಯ ಸಿಂಧಿಯಾ, ಜಿತಿನ್ ಪ್ರಸಾದ್ ಅವರಂತಹ ನಾಯಕರು ಏಕೆ ಪಕ್ಷ ತೊರೆದಿದ್ದಾರೆ ಎಂಬುದನ್ನು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ದೇಶಾದ್ಯಂತ ಹಲವಾರು ನಾಯಕರು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದು, ಆ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.