ಇಂಫಾಲ: ಮಣಿಪುರದಲ್ಲಿ ಜುಲೈನಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಹತ್ಯೆ ವಿರೋಧಿಸಿ ಮಂಗಳವಾರ ನಡೆದ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ ನಡೆಸಿದರು. ಈ ನಿಟ್ಟಿನಲ್ಲಿ ಎಚ್ಚರಿಕೆ ಕ್ರಮವಾಗಿ ಮಣಿಪುರ ಸರ್ಕಾರವು ಸೆಪ್ಟೆಂಬರ್ 29 ರವರೆಗೆ ರಾಜ್ಯದ ಎಲ್ಲಾ ಶಾಲೆಗಳನ್ನು ಬಂದ್ ಮಾಡುವುದಾಗಿ ಹೇಳಿದೆ. ಇಬ್ಬರು ವಿದ್ಯಾರ್ಥಿಗಳನ್ನು ಕೊಂದಿರುವ ಘಟನೆ ವಿರೋಧಿಸಿ ಮಂಗಳವಾರ ಇಂಫಾಲ್‌ನಲ್ಲಿ ನೂರಾರು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆ ವೇಳೆ ವಿದ್ಯಾರ್ಥಿನಿಯರು ಸೇರಿದಂತೆ ಕನಿಷ್ಠ 34 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಬಂಗಲೆಯತ್ತ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ವಿದ್ಯಾರ್ಥಿಗಳನ್ನು ಪೊಲೀಸರು ತಡೆದಿದ್ದು ಈ ಹಂತದಲ್ಲಿ ಘರ್ಷಣೆ ನಡೆದಿದೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಶೆಲ್ ಬಳಸಿದ್ದರಿಂದ ವಿದ್ಯಾರ್ಥಿಗಳು ಗಾಯಗೊಂಡರು.
ಜುಲೈ 6 ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಸಂದರ್ಭದಲ್ಲಿ ಏಳು ವರ್ಷದ ವಿದ್ಯಾರ್ಥಿನಿ ಹಿಜಾಮ್ ಲಿಂಥೋಯಿಂಗಂಬಿ ಮತ್ತು 20 ವರ್ಷದ ಫಿಜಾಮ್ ಹೆಮ್ಜಿತ್ ನಾಪತ್ತೆಯಾಗಿದ್ದರು. ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅವರನ್ನು ಹತ್ಯೆಗೈದಿದ್ದಾರೆ ಎಂದು ಅವರ ಕುಟುಂಬಗಳು ಶಂಕಿಸಿದ್ದಾರೆ.