ಗುವಾಹಟಿ: ಇಂಫಾಲ್ ಸೇರಿದಂತೆ ಮಣಿಪುರ ಕಣಿವೆಯ ಕೆಲವು ಭಾಗಗಳಲ್ಲಿ ಹಿಂಸಾಚಾರ ಮತ್ತೊಮ್ಮೆ ಉಲ್ಬಣಗೊಂಡಿದ್ದು, ಪ್ರತಿಭಟನಾಕಾರರು ವಿವಿಧ ಪ್ರದೇಶಗಳಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಪೊಲೀಸರು ಲಾಠಿ ಮತ್ತು ಅಶ್ರುವಾಯು ಶೆಲ್‌ಗಳನ್ನು ಬಳಸಿದ್ದು, ಅನೇಕ ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸೆಪ್ಟೆಂಬರ್ 16 ರಂದು ಭದ್ರತಾ ಪಡೆಗಳ ಸಮವಸ್ತ್ರ ಧರಿಸಿ ಆಧುನಿಕ ಶಸ್ತ್ರಾಸ್ತ್ರ ಹಿಡಿದಿದ್ದ ಐವರನ್ನು ಬಂಧಿಸಿದ ನಂತರ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದೆ. ಇದರಿಂದ ಆಕ್ರೋಶಗೊಂಡ ಜನರು ಕಣಿವೆ ಪ್ರದೇಶಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಸಿದರು. ಅಲ್ಲದೆ ಬಂಧಿತರನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಸ್ಥಳೀಯರು ಮಂಗಳವಾರದಿಂದ ಕಣಿವೆಯಲ್ಲಿ 48 ಗಂಟೆಗಳ ಲಾಕ್‌ಡೌನ್ ಜಾರಿಗೊಳಿಸಿದ್ದಾರೆ.
ಇಂದು ಮಧ್ಯಾಹ್ನ, ಮಹಿಳಾ ಪ್ರತಿಭಟನಾಕಾರರು ಬಂಧಿತರನ್ನು ಬೇಷರತ್ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಐದು ಕಣಿವೆ ಜಿಲ್ಲೆಗಳ ಪ್ರದೇಶಗಳಲ್ಲಿ ಪೊಲೀಸ್ ಠಾಣೆಗಳಿಗೆ ಮೆರವಣಿಗೆ ನಡೆಸಿದರು.
ಸಿಂಜಾಮೆಯಿ ಪೊಲೀಸ್ ಠಾಣೆಯ ಹೊರಗೆ ಗುಂಪು ಮತ್ತು ಪೊಲೀಸರ ನಡುವೆ ಘರ್ಷಣೆಗಳು ನಡೆದವು, ಅಲ್ಲಿ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಬಳಸಿದ ಕಾರಣ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.