ಜೈಪುರ: ಭೀಕರ ರಸ್ತೆ ಅಪಘಾತ ಸಂಭವಿಸಿ ವ್ಯಾನ್ ಚಾಲಕ ಹಾಗೂ ಪರೀಕ್ಷೆ ಬರೆಯಲು ಹೊರಟಿದ್ದ ಐವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜೈಪುರದ ಚಕ್ಸು ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.
ದುರಂತದಲ್ಲಿ ನಾಲ್ವರು ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಬರಾನ್ನಿಂದ ರೀಟ್ ಪರೀಕ್ಷೆ ಬರೆಯಲು 11 ಪರೀಕ್ಷಾರ್ಥಿಗಳು ವ್ಯಾನ್ನಲ್ಲಿ ತೆರಳುತ್ತಿದ್ದ ವೇಳೆ, ಚಕ್ಸುವಿನ ರಾಷ್ಟ್ರೀಯ ಹೆದ್ದಾರಿ 12 ರ ನಿಮೋಡಿಯಾ ಬಳಿ ದುರಂತ ಸಂಭವಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ವ್ಯಾನ್ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಚಕ್ಸು ಪೊಲೀಸರು, ತನಿಖೆ ಆರಂಭಿಸಿದ್ದಾರೆ.