ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ 20 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಮಂಗಳವಾರ ಘೋಷಣೆ ಮಾಡಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಈ ಹೂಡಿಕೆ ಮಾಡಲಾಗುವುದು. ಕೋಲ್ಕತ್ತಾದಲ್ಲಿ ನಡೆಯುತ್ತಿರುವ 7ನೇ ಬೆಂಗಾಲ್ ಜಾಗತಿಕ ಉದ್ಯಮ ಸಮಾವೇಶದಲ್ಲಿ ಅವರು ಮಾತನಾಡಿದರು. ಇನ್ನು ಈ ಸಮಾವೇಶವನ್ನು ಮಮತಾ ಬ್ಯಾನರ್ಜಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಮುಕೇಶ್ ಅಂಬಾನಿ ಅವರು “ಬಂಗಾಳದ ಅಭಿವೃದ್ಧಿಯ ಯಾವುದೇ ಸಾಧ್ಯತೆಯನ್ನು ರಿಲಯನ್ಸ್ ಬಿಡುವುದಿಲ್ಲ. ರಿಲಯನ್ಸ್ ಇದುವರೆಗೆ ಬಂಗಾಳದಲ್ಲಿ ಸುಮಾರು 45,000 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಮುಂದಿನ ಮೂರು ವರ್ಷಗಳಲ್ಲಿ ನಾವು 20 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಹೂಡಿಕೆ ಮಾಡುತ್ತೇವೆ,” ಎಂದು ಹೇಳಿದರು.
ದೂರಸಂಪರ್ಕ, ರೀಟೇಲ್ ಮತ್ತು ಜೈವಿಕ ಇಂಧನ ಷೇತ್ರಗಳಲ್ಲಿ ಈ 20 ಸಾವಿರ ಕೋಟಿ ಹೂಡಿಕೆ ಮಾಡಲಾಗುವುದು. ನಾವು 5ಜಿ ತಂತ್ರಜ್ಞಾನವನ್ನು ರಾಜ್ಯದ ಮೂಲೆ ಮೂಲೆಗೆ ಒಯ್ಯುತ್ತಿದ್ದೇವೆ, ವಿಶೇಷವಾಗಿ ಗ್ರಾಮೀಣ ಭಾಗದ ಬಂಗಾಳವನ್ನು ಸಂಪರ್ಕಿಸಲಾಗುತ್ತಿದೆ ಎಂದು ಅಂಬಾನಿ ಹೇಳಿದರು. ನಾವು ಬಂಗಾಳದ ಬಹುತೇಕ ಭಾಗಗಳನ್ನು ಆವರಿಸಿದ್ದೇವೆ. ಜಿಯೋ ನೆಟ್‌ವರ್ಕ್ ರಾಜ್ಯದ ಜನಸಂಖ್ಯೆಯ ಶೇ 98.8ರಷ್ಟು ಮತ್ತು ಕೋಲ್ಕತ್ತಾ ಟೆಲಿಕಾಂ ವಲಯದಲ್ಲಿ ಶೇ 100ರಷ್ಟು ಜನಸಂಖ್ಯೆಯನ್ನು ತಲುಪಿದೆ. ಜಿಯೋದ ಪ್ರಬಲ ನೆಟ್‌ವರ್ಕ್ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗದ ಜೊತೆಗೆ ಶಿಕ್ಷಣ, ಆರೋಗ್ಯ ಮತ್ತು ಕೃಷಿಯನ್ನು ಉತ್ತೇಜಿಸುತ್ತದೆ.
ರಿಲಯನ್ಸ್ ರೀಟೇಲ್ ಮುಂದಿನ ಎರಡು ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಸುಮಾರು 200 ಹೊಸ ಮಳಿಗೆಗಳನ್ನು ತೆರೆಯಲು ಯೋಜಿಸುತ್ತಿದೆ. ಸದ್ಯಕ್ಕೆ ಬಂಗಾಳದಲ್ಲಿ ಸುಮಾರು 1000 ರಿಲಯನ್ಸ್ ಸ್ಟೋರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಅದು 1200ಕ್ಕೆ ಹೆಚ್ಚಾಗುತ್ತದೆ. ನೂರಾರು ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ಮತ್ತು ಬಂಗಾಳದ ಸುಮಾರು 5.5 ಲಕ್ಷ ಕಿರಾಣಿ ಅಂಗಡಿಯವರು ನಮ್ಮ ರೀಟೇಲ್ ವ್ಯಾಪಾರದೊಂದಿಗೆ ಕೈ ಜೋಡಿಸಿದ್ದಾರೆ ಎಂದು ಮುಕೇಶ್ ಅಂಬಾನಿ ಹೇಳಿದರು. ಹೊಸ ಮಳಿಗೆಗಳನ್ನು ತೆರೆಯುವುದರಿಂದ ಅವರಿಗೆ ಲಾಭವಾಗಲಿದೆ. ಪ್ರಭುಜಿ, ಮುಖ್ರೋಚಕ್, ಸಿಟಿ ಗೋಲ್ಡ್, ಬಿಸ್ಕ್ ಫಾರ್ಮ್‌ನಂತಹ ಬಂಗಾಳದ ಹಲವು ಪ್ರಾದೇಶಿಕ ಬ್ರ್ಯಾಂಡ್‌ಗಳನ್ನು ಉಲ್ಲೇಖಿಸಿದ ಅವರು, ರಿಲಯನ್ಸ್ ರೀಟೇಲ್ ಮೂಲಕ ನಾವು ಈ ಬ್ರ್ಯಾಂಡ್‌ಗಳನ್ನು ಇಡೀ ದೇಶದಾದ್ಯಂತ ಕೊಂಡೊಯ್ಯುತ್ತಿದ್ದೇವೆ ಎಂದು ಹೇಳಿದರು.
ಭಾರತದ ಅತಿದೊಡ್ಡ ಜೈವಿಕ ಇಂಧನ ಉತ್ಪಾದಕ ರಿಲಯನ್ಸ್ ಮುಂದಿನ ಮೂರು ವರ್ಷಗಳಲ್ಲಿ 100 ಕಂಪ್ರೆಸ್ ಜೈವಿಕ ಅನಿಲ ಘಟಕಗಳನ್ನು ಸ್ಥಾಪಿಸಲಿದೆ. ಈ ಘಟಕಗಳು 5.5 ಮಿಲಿಯನ್ ಟನ್ ಕೃಷಿ ಅವಶೇಷಗಳು ಮತ್ತು ಸಾವಯವ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತವೆ. ಇದು ಸುಮಾರು 2 ಮಿಲಿಯನ್ ಟನ್ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ವಾರ್ಷಿಕವಾಗಿ 2.5 ಮಿಲಿಯನ್ ಟನ್ ಸಾವಯವ ಗೊಬ್ಬರವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ರೈತರಿಗೆ ದೊಡ್ಡ ಪ್ರಮಾಣದಲ್ಲಿ ಇಂಧನ ಪಾರ್ಕ್ ಗಳನ್ನು ಸ್ಥಾಪಿಸಲು ನಾವು ಸಹಾಯ ಮಾಡುತ್ತೇವೆ. ಇದರೊಂದಿಗೆ, ಅವರು ಆಹಾರ ಪೂರೈಕೆದಾರರೊಂದಿಗೆ ಇಂಧನ ಪೂರೈಕೆದಾರರಾಗಲು ಸಾಧ್ಯವಾಗುತ್ತದೆ ಮತ್ತು ಅವರ ಆದಾಯವೂ ಹೆಚ್ಚಾಗುತ್ತದೆ ಎಂದು ಮುಕೇಶ್ ಅಂಬಾನಿ ಹೇಳಿದರು.
ಮುಕೇಶ್ ಅಂಬಾನಿ ತಮ್ಮ ಭಾಷಣದಲ್ಲಿ ರಿಲಯನ್ಸ್ ಫೌಂಡೇಷನ್ ಪಶ್ಚಿಮ ಬಂಗಾಳದಲ್ಲಿ ನಡೆಸುತ್ತಿರುವ ಕೆಲಸಗಳನ್ನೂ ಪ್ರಸ್ತಾಪಿಸಿದರು. ಇವುಗಳಲ್ಲಿ ಪ್ರಮುಖವಾದದ್ದು ಕೋಲ್ಕತ್ತಾದ ಪ್ರಸಿದ್ಧ ಕಾಳಿಘಾಟ್ ದೇವಾಲಯದ ನವೀಕರಣ ಮತ್ತು ಜೀರ್ಣೋದ್ಧಾರ. ಶತಮಾನಗಳಷ್ಟು ಹಳೆಯದಾದ ಈ ದೇವಾಲಯದ ದುರಸ್ತಿ ಮತ್ತು ಸೌಂದರ್ಯ ಹೆಚ್ಚಿಸುವ ಕಾರ್ಯವನ್ನು ರಿಲಯನ್ಸ್ ಫೌಂಡೇಷನ್ ಮಾಡುತ್ತಿದೆ. ಫೌಂಡೇಷನ್‌ನ ‘ಸ್ವದೇಶ್’ ಉಪಕ್ರಮದ ಅಡಿಯಲ್ಲಿ ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಸಾಂಪ್ರದಾಯಿಕ ಕಲೆ ಮತ್ತು ಕರಕುಶಲಗಳನ್ನು ಭಾರತದಲ್ಲಿ ಮತ್ತು ಜಾಗತಿಕವಾಗಿ ಪ್ರಚಾರ ಮಾಡಲಾಗುತ್ತಿದೆ. ರಿಲಯನ್ಸ್ ಫೌಂಡೇಷನ್ ಬಂಗಾಳದ ಯುವ ಪೀಳಿಗೆಯ ಕುಶಲಕರ್ಮಿಗಳಿಗೆ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸುತ್ತದೆ. ಅಲ್ಲದೆ, ನೇಕಾರರು, ಕುಶಲಕರ್ಮಿಗಳು ಮತ್ತು ಕರಕುಶಲಕರ್ಮಿಗಳ ಉತ್ಪನ್ನಗಳನ್ನು ರಿಲಯನ್ಸ್‌ನ ರೀಟೇಲ್ ನ ಔಟ್‌ಲೆಟ್‌ಗಳ ಮೂಲಕ ಮಾರಾಟ ಮಾಡಲು ‘ಬಿಸ್ವಾ ಬಾಂಗ್ಲಾ ಕಾರ್ಪೊರೇಷನ್’ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದರು.