ಚೆನ್ನೈ( ಫೆ. 07) : ಮನೆಯ ಎದುರಿಗೆ ಕಾರ್ ಪಾರ್ಕಿಂಗ್ ಮಾಡುವ ವಿಚಾರ ವಿಕೋಪಕ್ಕೆ ಹೋಗಿದ್ದು ಕೊಲೆಯಲ್ಲಿ ಅಂತ್ಯವಾಗಿದೆ. ಚೆನ್ನೈನ ಪುಝಲ್ ಟೌನ್ ನಲ್ಲಿ ಘಟನೆ ನಡೆದಿದೆ ಕಾರ್ ಪಾರ್ಕಿಂಗ್ ವಿಚಾರಕ್ಕೆ ಉಂಟಾದ ಜಗಳದಲ್ಲಿ ವೃದ್ಧನ ಹತ್ಯೆಯಾಗಿದೆ. ನೆರೆಹೊರೆಯವರೆ ಆತನ ಮೇಲೆ ಹಲ್ಲೆ ಮಾಡಿ ಸಾಯಿಸಿದ್ದಾರೆ.
ಫೆಬ್ರವರಿ 1 ರಂದು ಈ ಘಟನೆ ನಡೆದಿದ್ದು, ಭರತ ರಾಮರ್ (62) ಎಂಬುವರ ಕೊಲೆಯಾಗಿದೆ. ವೃದ್ಧ ತಮ್ಮ ಮನೆ ಮುಂದೆ ಕಾರು ನಿಲ್ಲಿಸದಂತೆ ಪಕ್ಕದ ಮನೆಯ ಕುಮಾರನ್ ಕೇಳಿಕೊಂಡಿದ್ದಾನೆ. ಆದರೂ ಕುಮಾರನ್ ಕಾರು ನಿಲ್ಲಿಸಿದ್ದಾನೆ. ಮತ್ತೆ ಪ್ರಶ್ನೆ ಮಾಡಿದ ವೃದ್ಧನ ಮೇಲೆ ಕೋಪಗೊಂಡ ಕುಮಾರನ್ ತನ್ನ ಕುಟುಂಬಸ್ಥರೊಂದಿಗೆ ವೃದ್ಧನ ಮನೆಗೆ ನುಗ್ಗಿದ್ದಾನೆ. ದೊಣ್ಣೆ ಮತ್ತು ರಾಡ್‌ಗಳಿಂದ ರಾಮರ್ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯ ನಂತರ ರಾಮರ್ ಮತ್ತು ಅವರ ಕುಟುಂಬವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ರಾಮರ್ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.
ಜನವರಿ 26 ರಂದು ರಾಮರ್ ತನ್ನ ಮನೆಯಲ್ಲಿ ಗೃಹಪ್ರವೇಶ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಇದೇ ಕಾರಣಕ್ಕೆ ತಮ್ಮ ಮನೆ ಮುಂದೆ ಕಾರು ನಿಲ್ಲಿಸಬೇಡಿ.. ರಸ್ತೆ ಬ್ಲಾಕ್ ಆಗುತ್ತದೆ ಎಂದು ಕುಮಾರನ್ ಬಳಿ ಹೇಳಿದ್ದರು. ಆದರೂ ಕುಮಾರನ್ ಕಾರು ನಿಲ್ಲಿಸಿದಾಗ ಮತ್ತೆ ಮತ್ತೆ ಪ್ರಶ್ನೆ ಮಾಡಿದ್ದರು.
ಕುಮಾರನ್ ಮತ್ತು ಆತನ ತಾಯಿ ಮಲಾರ್, ಸಂಬಂಧಿಕರಾದ ಅರುಣಗಿರಿ, ಪಳನಿ, ರೇವತಿ ಮತ್ತು ಸಂಗೀತಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಕುಮಾರನ್‌ನನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.