ತಮಿಳುನಾಡು: ತಾಯಿ ಪ್ರೀತಿಗೆ ಪುತ್ರರಿಬ್ಬರು ದ್ರೋಹ ಎಸಗಿದ್ದು, ಬರೋಬ್ಬರಿ 10 ವರ್ಷಗಳ ಕಾಲ ಆಕೆಯನ್ನು ರೂಮ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ.
ಪೊಲೀಸ್ ಕುಟುಂಬವೊಂದರಲ್ಲಿ ಇಂತಹ ಘಟನೆ ನಡೆದಿದೆ ಎಂದರೆ ನಂಬಲು ಅಸಾಧ್ಯ. ಜ್ಞಾನಜೋತಿ (72) ಎಂಬವರ ಇಬ್ಬರು ಪುತ್ರರಾದ ಷಣ್ಮುಗಸುಂದರಂ (50) ಮತ್ತು ವೆಂಕಟೇಶನ್ (45) ಈ ಕೃತ್ಯ ಎಸಗಿದ್ದಾರೆ.
ಚೆನ್ನೈನಲ್ಲಿ ಷಣ್ಮುಗಸುಂದರಂ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರೆ, ದೂರದರ್ಶನ ಉದ್ಯೋಗಿಯಾಗಿ ವೆಂಕಟೇಶನ್ ಕೆಲಸ ಮಾಡುತ್ತಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಮಾತನಾಡಿದ್ದು, “ವ್ಯಕ್ತಿಯೊಬ್ಬರು ಈ ಘಟನೆಗೆ ಸಂಬಂಧಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಆ ಬಳಿಕ ನಮ್ಮ ಗಮನಕ್ಕೆ ವಿಷಯ ಬಂದಿದ್ದು, ನಾವು ವೃದ್ಧೆಯನ್ನು ರಕ್ಷಣೆ ಮಾಡಿದ್ದೇವೆ” ಎಂದಿದ್ದಾರೆ.
ಇನ್ನು ಸುದ್ದಿಗಾರರೊಂದಿಗೆ ಮಾತನಾಡಿದ ಷಣ್ಮುಗಸುಂದರಂ, “ತಾಯಿಗೆ ಬರುತ್ತಿದ್ದ 30 ಸಾವಿರ ರೂ. ಪಿಂಚಣಿಯನ್ನು ವೆಂಕಟೇಶ್ ಬಳಕೆ ಮಾಡುತ್ತಿದ್ದ. ಅವರ ಈ ಸ್ಥಿತಿಗೆ ವೆಂಕಟೇಶ್ ಕಾರಣ” ಎಂದು ಅಣ್ಣನ ವಿರುದ್ಧ ಆರೋಪ ಮಾಡಿದ್ದಾರೆ. ಸದ್ಯ ಪೊಲೀಸರು ಸೆಕ್ಷನ್ 24 ರ ಅಡಿಯಲ್ಲಿ ಪ್ರಕರಣ ದಾಖಲಿದ್ದು, ವೃದ್ಧೆಯನ್ನು ರಕ್ಷಣೆ ಮಾಡಿದ್ದಾರೆ.
ಇನ್ನು ಮಹಿಳೆಯನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿನೇಶ್ ಪೊನ್‌ರಾಜ್ ಆಲಿವರ್ ತಿಳಿಸಿದ್ದು, ಆಕೆ ಶೀಘ್ರ ಚೇತರಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ವೈದ್ಯರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.