ಹೈದರಾಬಾದ್: ತೆಲಂಗಾಣದ ಮಚೇರಿಯಲ್ ಜಿಲ್ಲೆಯಲ್ಲಿ ಮನೆಯೊಂದಕ್ಕೆ ಬೆಂಕಿ ತಗುಲಿ ಒಂದೇ ಕುಟುಂಬದ ಆರು ಮಂದಿ ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮಂಡಮಾರಿ ಮಂಡಲದ ವೆಂಕಟಾಪುರ ಗ್ರಾಮದಲ್ಲಿ ಮಧ್ಯರಾತ್ರಿ ಈ ದುರಂತ ಸಂಭವಿಸಿದೆ.
ಎಲ್ಲಾರು ಮಲಗಿದ್ದಾಗ ಶಿವಯ್ಯ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಯ್ಯ (50), ಅವರ ಪತ್ನಿ ಪದ್ಮಾ (45), ಪದ್ಮಾ ಅವರ ಸೋದರಳಿಯ ಮೌನಿಕಾ (23), ಅವರ ಇಬ್ಬರು ಪುತ್ರಿಯರು ಮತ್ತು ಸಿಂಗರೇಣಿ ಕಲ್ಲಿದ್ದಲು ಗಣಿಯ ಉದ್ಯೋಗಿ ಶಾಂತಯ್ಯ (52) ಸಜೀವ ದಹನವಾಗಿದ್ದಾರೆ.
ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು. ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಅಖಿಲ್ ಮಹಾಜನ್ ತಿಳಿಸಿದ್ದಾರೆ.
ಸಮಗ್ರ ತನಿಖೆಯ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಅವರು ಹೇಳಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವಗಳನ್ನು ಶವಪರೀಕ್ಷೆಗಾಗಿ ಮಂಚೇರಿಯಲ್ ಗೆ ಸ್ಥಳಾಂತರಿಸಿದ್ದಾರೆ.