ಉತ್ತರಾಖಂಡ್: ಉತ್ತರಾಖಂಡ ಅರಣ್ಯ ಇಲಾಖೆಯಿಂದ ಸೆರೆ ಸಿಕ್ಕ ಏಳು ವರ್ಷದ ಗಂಡು ಚಿರತೆಯನ್ನು ಸಿಟ್ಟಿಗೆದ್ದ ಜನರ ಗುಂಪೊಂದು ಜೀವಂತ ಸುಟ್ಟುಕೊಂದು ಹಾಕಿದೆ. ಪೌರಿ ಗರ್ವಾಲ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಮಂಗಳವಾರ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಜನರು ಚಿರತೆಯ ಸಜೀವ ದಹನ ಮಾಡಿದ್ದಾರೆ.
ಅಧಿಕಾರಿಗಳ ಪ್ರಕಾರ, ಈ ತಿಂಗಳ ಆರಂಭದಲ್ಲಿ ಚಿರತೆಯೊಂದರಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಕ್ಕಾಗಿ ಸ್ಥಳೀಯರು ಆಕ್ರೋಶಗೊಂಡಿದ್ದರು. ಆದರೆ, ಮಹಿಳೆಯ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಚಿರತೆ ಅದೇ ಚಿರತೆಯೇ ಎಂಬುದು ಸ್ಪಷ್ಟವಾಗಿಲ್ಲ. ಸ್ಥಳೀಯ ಗ್ರಾಮ ಪ್ರಧಾನ್ ಮತ್ತು ಇತರ 149 ಜನರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಇತರ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಲಾಗಿದೆ.
ದಿ ಇಂಡಿಯನ್ ಎಕ್ಸ್ಪ್ರೆಸ್ನೊಂದಿಗೆ ಮಾತನಾಡಿದ ಜಿಲ್ಲಾ ಅರಣ್ಯಾಧಿಕಾರಿ ಮುಖೇಶ್ ಶರ್ಮಾ, ಮೇ 15 ರಂದು ಜಿಲ್ಲೆಯ ಸಪ್ಲೋಡಿ ಗ್ರಾಮದಲ್ಲಿ 47 ವರ್ಷದ ಸುಷ್ಮಾ ದೇವಿ ಎಂದು ಗುರುತಿಸಲಾದ ಮಹಿಳೆಯನ್ನು ಚಿರತೆ ಕೊಂದಿತು ನಂತರ ಅರಣ್ಯ ಅಧಿಕಾರಿಗಳು ಎರಡು ವಿಭಿನ್ನ ಸ್ಥಳಗಳಲ್ಲಿ ಪ್ರಾಣಿ ಹಿಡಿಯಲು ಬೋನುಗಳನ್ನು ಇರಿಸಿದರು.
ಮಂಗಳವಾರ ಬೆಳಗ್ಗೆ 5.20ರ ಸುಮಾರಿಗೆ ಬೋನಿನಲ್ಲಿ ಚಿರತೆ ಸಿಕ್ಕಿಬಿದ್ದಿರುವ ಮಾಹಿತಿ ಸಿಕ್ಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲಿ ಅವರು ಸ್ಥಳೀಯರೊಂದಿಗೆ ಮಾತನಾಡಿದರು, ಆದರೆ ಸ್ಥಳೀಯ ಗ್ರಾಮ ಪ್ರಧಾನ್ ನೇತೃತ್ವದಲ್ಲಿ ಕೋಪಗೊಂಡ ಗುಂಪು ಪಂಜರದ ಮೇಲೆ ದಾಳಿ ಮಾಡಿದೆ.
ಪೆಟ್ರೋಲ್ ಸುರಿದು ಒಣ ಹುಲ್ಲಿನ ಮೇಲೆ ಎಸೆದು ಬೆಂಕಿ ಹಚ್ಚಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಅವರನ್ನು ತಡೆಯಲು ಪ್ರಯತ್ನಿಸಿದರು ಆದರೆ ಸಪ್ಲೋಡಿ ಮತ್ತು ಮೂರು-ನಾಲ್ಕು ಅಕ್ಕಪಕ್ಕದ ಹಳ್ಳಿಗಳ ಗುಂಪು ಅವರಿಗೆ ನಿಯಂತ್ರಿಸುವುದಕ್ಕಿಂತ ಹೆಚ್ಚಾಗಿತ್ತು, “ಎಂದು ಶರ್ಮಾ ಹೇಳಿದರು.
ಘಟನೆಯ ನಂತರ, ನಾವು ಚಿರತೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ. ಕಾನೂನನ್ನು ಕೈಗೆತ್ತಿಕೊಂಡ ಗ್ರಾಮಸ್ಥರ ವಿರುದ್ಧವೂ ಎಫ್ಐಆರ್ ದಾಖಲಿಸಿದ್ದೇವೆ. ಹತ್ಯೆಯಾದ ಪ್ರಾಣಿ ಏಳು ವರ್ಷದ ಗಂಡು ಚಿರತೆ. ಮಹಿಳೆಯನ್ನು ಕೊಂದದ್ದು ಅದೇ ಚಿರತೆಯೇ ಎಂಬುದನ್ನು ನಾವು ಖಚಿತಪಡಿಸಲು ಸಾಧ್ಯವಾಗಲಿಲ್ಲ. ಗ್ರಾಮಸ್ಥರು ಚಿರತೆಯ ಮೇಲೆ ಏಕೆ ದಾಳಿ ಮಾಡಿದರು ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.