ಕೋಲ್ಕತಾ, ಫೆ.21: ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಮೈನಾಗುರಿ ಪ್ರದೇಶದಲ್ಲಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು 12 ಮಂದಿ ಗಾಯಗೊಂಡಿದ್ದಾರೆ.
ಮೈನಾಗುರಿಯ ಉಲ್ಲಾದಬೀರ್ ಗ್ರಾಮದಲ್ಲಿ 20 ದಿನಗೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರೈಲರ್, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ಪರಿಣಾಮ ಹೇಗಿತ್ತೆಂದರೆ ಟ್ರೈಲರ್ ಸಂಪೂರ್ಣವಾಗಿ ನಜ್ಜುಗುಜ್ಜಾಯಿತು.
ಪೊಲೀಸರು ಸ್ಥಳೀಯ ಜನರೊಂದಿಗೆ ರಕ್ಷಣಾ ಕಾರ್ಯವನ್ನು ಕೈಗೊಂಡರು. ಗಾಯಗೊಂಡವರನ್ನು ಜಲ್ಪೈಗುರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಗಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ಮೃತರನ್ನು ಕಮಲ್ ಮಲ್, ಸುಮನ್ ಶೇಖ್ ಮತ್ತು ಹಸನ್ ಶೇಖ್ ಎಂದು ಗುರುತಿಸಲಾಗಿದೆ. ಇತರ ೧೨ ಜನರ ಸ್ಥಿತಿ ಗಂಭೀರವಾಗಿದೆ ಮತ್ತು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಲ್ಲಾ ಕಾರ್ಮಿಕರು ಪ್ರಸ್ತುತ ರೈಲ್ವೆ ಇಲಾಖೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಮಂಗಳವಾರ ಬೆಳಿಗ್ಗೆ ಅವರು ನ್ಯೂ ಮಾಲ್ಬಜಾರ್-ಚಂಗ್ರಬಂಧ ರೈಲ್ವೆ ಮಾರ್ಗದ ವಿದ್ಯುದೀಕರಣ ಕಾರ್ಯಕ್ಕಾಗಿ ತೆರಳುತ್ತಿದ್ದರು. ಮೃತರು ಮತ್ತು ಗಾಯಗೊಂಡವರು ಮುಖ್ಯವಾಗಿ ಮುರ್ಷಿದಾಬಾದ್ ಮತ್ತು ಬಿರ್ಭುಮ್ ಜಿಲ್ಲೆಗಳ ನಿವಾಸಿಗಳಾಗಿದ್ದಾರೆ.