ಬಿಜಿಂಗ್ : ಚೀನಾ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ತ್ರೈಮಾಸಿಕ ವರದಿಯ ಅಂಕಿ-ಅಂಶಗಳ ಪ್ರಕಾರ ನಿರ್ಮಾಣ ಮತ್ತು ಇಂಧನ ಕ್ಷೇತ್ರ ತೂಗುಯ್ಯಾಲೆಯಲ್ಲಿವೆ. ವಿಶ್ವದ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾಗಿರುವ ಚೀನಾ ಕೊರೊನಾದ ಬಳಿಕ ಚೇತರಿಸಿಕೊಳ್ಳಲಾಗುತ್ತಿಲ್ಲ. ಸೆಪ್ಟಂಬರ್ ಅಂತ್ಯಕ್ಕೆ ಚೀನಾದ ಆರ್ಥಿಕ ಬೆಳವಣಿಗೆಯ ದರ ಶೇ.4.9ರಷ್ಟಿದೆ. ಕಳೆದ ತ್ರೀಮಾಸಿಕದಲ್ಲಿ ಶೇ.7.9ರಷ್ಟು ಅಭಿವೃದ್ಧಿಯನ್ನು ದಾಖಲಿಸಿದ್ದ ಆರ್ಥಿಕತೆ ಗಂಭೀರ ಸ್ವರೂಪದ ಕುಸಿತ ಕಂಡಿದೆ.
ಕಾರ್ಖಾನೆ ಉತ್ಪಾದನೆ, ಚಿಲ್ಲರೆ ವ್ಯಾಪಾರ, ನಿರ್ಮಾಣ ಕ್ಷೇತ್ರದಲ್ಲಿನ ಹೂಡಿಕೆ ಮತ್ತು ಇತರೆ ಸ್ಥಿರಾಸ್ತಿಗಳು ದುರ್ಬಲಗೊಂಡಿವೆ. ನಿರ್ಮಾಣ ಮತ್ತು ಕೈಗಾರಿಕಾ ಕ್ಷೇತ್ರಗಳು ಲಕ್ಷಗಟ್ಟಲೆ ಉದ್ಯೋಗ ಸೃಷ್ಟಿಗೆ ಬೆಂಬಲವಾಗಿದ್ದವು. ಕಳೆದ ವರ್ಷಕ್ಕಿಂತಲೂ ಈ ಕ್ಷೇತ್ರಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಇದರಿಂದ ನಿರ್ಮಾಣ ಕ್ಷೇತ್ರಗಳ ಉದ್ದಿಮೆದಾರರು ಸೋರಗುತ್ತಿದ್ದಾರೆ.
ವಿದ್ಯುತ್ ಕಡಿತ ಜಾರಿ ಮಾಡಿದ್ದರಿಂದ ಸೆಪ್ಟಂಬರ್‍ನಲ್ಲಿ ಉತ್ಪಾದನಾ ವಲಯ ಸಂಕಷ್ಟಕ್ಕೆ ಸಿಲುಕಿದೆ. ಬಹಳಷ್ಟು ರಾಜ್ಯಗಳು ನಿಗದಿತ ಗುರಿಗಿಂತಲೂ ಕಡಿಮೆ ಉತ್ಪಾದನೆ ಮಾಡಿವೆ. ಖಾಸಗಿ ವಲಯಗಳು ತಮ್ಮ ಬೆಳವಣಿಗೆಯನ್ನು ಕಡಿತ ಮಾಡಿಕೊಂಡಿವೆ. ಕನಿಷ್ಠ ಶೇ.8ರಷ್ಟು ನಿರೀಕ್ಷೆ ಇತ್ತು. ಆದರೆ ಖಾಸಗಿ ವಲಯ ಅದರತ್ತ ಗಮನ ಹರಿಸಿಲ್ಲ. ಹೀಗಾಗಿ ವಿಶ್ವದ ಪ್ರಬಲ ಆರ್ಥಿಕ ದೇಶ ಕುಸಿಯುತ್ತಿದೆ.