ಕೊಲಂಬೋ : ದ್ವೀಪರಾಷ್ಟ್ರ ಶ್ರೀಲಂಕಾ ಮೇಲೆ ಮೇ 18ರಂದು ದಾಳಿ ನಡೆಸಲು ನಿಷೇಧಿತ ಎಲ್ಟಿಟಿಇ ಸಂಘಟನೆ ಯೋಜಿಸಿದೆ ಎಂಬ ವರದಿ ಕುರಿತು ತನಿಖೆ ನಡೆಸುವುದಾಗಿ ಶ್ರೀಲಂಕಾ ಸರ್ಕಾರ ಹೇಳಿದೆ.
ಮೇ 18 ಮುಲ್ಲಿವೈಕಲ್ ವಾರ್ಷಿಕೋತ್ಸವ ನಡೆಯಲಿದೆ. 2009ರ ಮೇ 18ರಂದು ಎಲ್ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಹತ್ಯೆಯಾಗಿತ್ತು.
ಆ ದಿನವನ್ನು ಮುಲ್ಲಿ ವೈಕಲ್ ವಾರ್ಷಿಕೋತ್ಸವವನ್ನಾಗಿ ಆಚರಿಸಲು ಮತ್ತು ಶ್ರೀಲಂಕಾ ಮೇಲೆ ದಾಳಿ ನಡೆಸಲು ಷಡ್ಯಂತ್ರ ರೂಪುಗೊಂಡಿದೆ ಎಂದು ಭಾರತೀಯ ಸುದ್ದಿಪತ್ರಿಕೆ ವರದಿ ಮಾಡಿದೆ. ಈ ಕುರಿತು ತನಿಖೆ ನಡೆಸಲಾಗುವುದು. ಭದ್ರತಾ ಪಡೆಗಳು ಮತ್ತು ಗುಪ್ತಚರ ಸಂಸ್ಥೆ ಮಾಹಿತಿ ಆಧರಿಸಿ ದೇಶದ ಶಾಂತಿ ಕದಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.
ಈ ನಡುವೆ ಶ್ರೀಲಂಕಾದ ಅಧ್ಯಕ್ಷ ಗೋಟಾ ಬಯಾ ರಾಜಪಕ್ಸೆ ಅವರ ರಾಜೀನಾಮೆಗೆ ಒತ್ತಾಯಿಸಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆಗೆ ನೂತನ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಏ.9ರಿಂದ ಕೊಲಂಬೋದ ಗಾಲ್ಫೇಸ್ಗ್ರೀನ್ನಲ್ಲಿ ಮೊಕ್ಕಾಂ ಹೂಡಿರುವ ಪ್ರತಿಭಟನಾಕಾರರು ಗೋಟಾ ಗೋ ಹೋಮ್ ಎಂಬ ಘೋಷಣೆಗಳ ಜತೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಸ್ವತಂತ್ರ ನಂತರ ಶ್ರೀಲಂಕಾ ಎದುರಿಸುತ್ತಿರುವ ಗಂಭೀರ ಸ್ವರೂಪದ ಆರ್ಥಿಕ ಬಿಕ್ಕಟ್ಟಿನಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ದಿನನಿತ್ಯದ ಅಗತ್ಯ ವಸ್ತುಗಳಿಗಾಗಿ ವಾರಗಟ್ಟಲೆ ಕಾಯಬೇಕಿದೆ. ಇದರಿಂದ ಜನಸಾಮಾನ್ಯರು ರೊಚ್ಚಿಗೆದ್ದಿದ್ದು, ಪ್ರತಿಭಟನೆಗೆ ಮುಂದಾಗಿದ್ದರು.
ಹೋರಾಟಗಳು ಹಿಂಸಾಚಾರಕ್ಕೆ ತಿರುಗಿ 9 ಮಂದಿಯ ಹತ್ಯೆಯೂ ಆಗಿದೆ. ರಾಜಕೀಯ ಕ್ಷಿಪ್ರ ಬೆಳವಣಿಗೆಯಲ್ಲಿ ಗೋಟಾ ಬಯಾ ರಾಜಪಕ್ಸೆ ಅವರ ಸಹೋದರ ಮಹೀಂದ ರಾಜಪಕ್ಸೆ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಲಾಯಿತು.
ಬಳಿಕ ಯುನೈಟೆಡ್ ನ್ಯಾಷನಲ್ ಪಾರ್ಟಿಯ ನಾಯಕ ವಿಕ್ರಮ್ ಸಿಂಘೆ ಅವರನ್ನು ಗುರುವಾರ ಪ್ರಧಾನಿಯನ್ನಾಗಿ ಅಧ್ಯಕ್ಷರು ನೇಮಿಸಿದ್ದರು. ಆದರೆ, ಸರ್ಕಾರದಲ್ಲಿ ಒಮ್ಮತವಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದ್ದು, ಪ್ರತಿಭಟನಾಕಾರರಿಗೆ ಪ್ರಧಾನಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಸರ್ವಪಕ್ಷಗಳ ಸರ್ಕಾರ ರಚನೆಗೆ ಶ್ರೀಲಂಕಾದಲ್ಲಿ ಸರ್ಕಸ್ ನಡೆಯುತ್ತಿದೆ. ಕಳೆದೆರಡು ದಿನಗಳ ಹಿಂದೆ ಹೊಸದಾಗಿ ನಾಲ್ವರು ಸಚಿವರನ್ನು ನೇಮಿಸಲಾಗಿದೆ.
ಈ ನಡುವೆ ವೆಸಕ್ಪೋಯಾ ದಿನಾಚರಣೆಯಲ್ಲಿ ಮಾತನಾಡಿರುವ ಅಧ್ಯಕ್ಷರು ಸಂಕಷ್ಟದಲ್ಲಿರುವ ದೇಶದ ರಕ್ಷಣೆಗಾಗಿ ಎಲ್ಲ ಶಾಸಕರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ.