ಬ್ರಿಟನ್: ಬ್ರಿಟನ್‌ನ ಮುಂದಿನ ಪ್ರಧಾನಿಯಾದರೆ ಚೀನಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬ್ರಿಟನ್ ಪ್ರಧಾನಿ ಹುದ್ದೆ ರೇಸ್ ನಲ್ಲಿರುವ ರಿಷಿ ಸುನಕ್ ಘೋಷಣೆ ಮಾಡಿದ್ದಾರೆ.
ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷವನ್ನು ಮುನ್ನಡೆಸುವ ಹಾಗೂ ಬ್ರಿಟನ್ ಪ್ರಧಾನಿ ರೇಸ್ ನ ಕಡೆಯ ಹಂತದಲ್ಲಿ ಕಣದಲ್ಲಿ ಉಳಿದಿರುವ ಇಬ್ಬರು ಅಭ್ಯರ್ಥಿಗಳಲ್ಲಿ ಒಬ್ಬರಾದ ಅವರ ಪ್ರತಿಸ್ಪರ್ಧಿ ಲಿಜ್ ಟ್ರಸ್ ಅವರು ʼಸನಾಕ್ ಚೀನಾ ಮತ್ತು ರಷ್ಯಾ ವಿಚಾರಗಳಲ್ಲಿ ದುರ್ಬಲರಾಗಿದ್ದಾರೆ ಎಂದು ಗಂಭೀರವ ಆರೋಪ ಮಾಡಿದ್ದರು.
ಈ ಬಗ್ಗೆ ಸ್ಪಷ್ಟ ಮಾತುಗಳಲ್ಲಿ ಉತ್ತರ ನೀಡಿರುವ ಸುನಕ್, ಚೀನಾ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದರಲ್ಲದೇ, ಏಷ್ಯಾದ ಸೂಪರ್ ಪವರ್ ದೇಶವಾದ ಚೀನಾ ದೇಶೀಯ ಮತ್ತು ಜಾಗತಿಕ ಭದ್ರತೆಗೆ “ನಂಬರ್ ಒನ್ ಬೆದರಿಕೆ” ಎಂದು ಕರೆದಿದ್ದಾರೆ.
ಅಲ್ಲದೇ ಬ್ರಿಟನ್ ನಲ್ಲಿರುವ 30 ಕನ್ಫ್ಯೂಷಿಯಸ್ ಸಂಸ್ಥೆಗಳನ್ನು ಮುಚ್ಚಿಸುತ್ತೇನೆ. ಈ ಮೂಲಕ ಚೀನಾ ಸಂಸ್ಕೃತಿ ಮತ್ತು ಭಾಷಾ ಪ್ರಭಾವಗಳು ಬ್ರಿಟನ್ ನಲ್ಲಿ ಹರಡುವುದನ್ನು ತಡೆಯುತ್ತೇನೆ ಎಂದು ಸುನಾಕ್ ಹೇಳಿದ್ದಾರೆ.
ಚೀನಾವು ನಮ್ಮ ತಂತ್ರಜ್ಞಾನವನ್ನು ಕದಿಯುತ್ತಿದೆ ಮತ್ತು ನಮ್ಮ ವಿಶ್ವವಿದ್ಯಾನಿಲಯಗಳಿಗೆ ಕದ್ದು ನುಸುಳುತ್ತಿದೆ ಎಂದು ಕಿಡಿಕಾರಿರುವ ಸುನಕ್, ಚೀನಾ ರಷ್ಯಾದ ತೈಲವನ್ನು ಖರೀದಿಸುವ ಮೂಲಕ ವಿದೇಶದಲ್ಲಿ ವ್ಲಾಡಿಮಿರ್ ಪುಟಿನ್ ಗೆ ಆಸರೆಯಾಗಿದೆ. ತೈವಾನ್ ಸೇರಿದಂತೆ ನೆರೆಹೊರೆಯವರನ್ನು ಬೆದರಿಸಲು ಪ್ರಯತ್ನಿಸುತ್ತಿದೆ. ಬ್ರಿಟನ್ ಮತ್ತು ಪಶ್ಚಿಮದಾದ್ಯಂತ ರಾಜಕಾರಣಿಗಳು ಬಹಳ ಸಮಯದಿಂದ ಚೀನಾಕ್ಕೆ ರೆಡ್ ಕಾರ್ಪೆಟ್ ಹಾಸಿದ್ದಾರೆ ಮತ್ತು ಚೀನಾದ ಕೆಟ್ಟ ಚಟುವಟಿಕೆ ಮತ್ತು ಮಹತ್ವಾಕಾಂಕ್ಷೆಗಳ ಬಗ್ಗೆ ಕುರುಡರಾಗಿದ್ದಾರೆ. “ನಾನು ಪ್ರಧಾನಿಯಾದ ಮೊದಲ ದಿನವೇ ಇವೆಲ್ಲವನ್ನು ಬದಲಾಯಿಸುತ್ತೇನೆ ಎಂದು ಹೇಳಿದ್ದಾರೆ.
ಅಚ್ಚರಿಯ ವಿಚಾರವೆಂದರೆ, ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ʼ ಕೆಲದಿನಗಳ ಹಿಂದೆ ʼಸುನಕ್ ಅವರು ಯುಕೆ-ಚೀನಾ ಸಂಬಂಧಗಳನ್ನು ಅಭಿವೃದ್ಧಿಪಡಿಸುವಲ್ಲಿ ಸ್ಪಷ್ಟ ಮತ್ತು ಪ್ರಾಯೋಗಿಕ ದೃಷ್ಟಿಕೋನ ಹೊಂದಿರುವ ಏಕೈಕ ಅಭ್ಯರ್ಥಿʼ ಎಂದು ಗುಣಗಾನ ಮಾಡಿತ್ತು. ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ಪ್ರತಿಸ್ಪರ್ಧಿ ಲಿಜ್ ಟ್ರೂಸ್ ಸುನಾಕ್ ರನ್ನು ಹಣಿಯಲು ಯತ್ನಿಸಿದ್ದರು. ಈ ವಿಚಾರವಾಗಿ ಖಡಕ್ ಹೇಳಿಕೆ ನೀಡುವ ಮೂಲಕ ಸುನಕ್ ಲಿಜ್ ಟ್ರಸ್ ಗೆ ಸ್ಪಷ್ಟ ತಿರುಗೇಟು ನೀಡಿದ್ದಾರೆ.