ಕೌಲಾಲಂಪುರ: ಮಲೇಷ್ಯಾದ ಸೆಲಾಂಗೋರ್ ರಾಜ್ಯದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆಯಾಗಿದ್ದು, ಇನ್ನೂ 12 ಮಂದಿ ನಾಪತ್ತೆಯಾಗಿದ್ದಾರೆ ಎಂದು ಮಲೇಷ್ಯಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಮತ್ತು ವಿವಿಧ ಏಜೆನ್ಸಿಗಳು ಸಂತ್ರಸ್ತರನ್ನು ಹುಡುಕಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ, ಅವರನ್ನು ಪತ್ತೆಹಚ್ಚಲು ಯಂತ್ರೋಪಕರಣಗಳು ಮತ್ತು ಶೋಧನಾ ನಾಯಿಗಳನ್ನು ಬಳಸಲಾಗುತ್ತಿದೆ ಎಂದು ಉಪ ಪ್ರಧಾನಿ ಅಹ್ಮದ್ ಜಾಹಿದ್ ಹಮೀದಿ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
“ಈ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪಗಳು” ಎಂದು ಅವರು ಪ್ರದೇಶಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಮುಂಬರುವ ದಿನಗಳಲ್ಲಿ, ವಿಶೇಷವಾಗಿ ಪೂರ್ವ ಕರಾವಳಿಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿರುವುದರಿಂದ, ಇಳಿಜಾರುಗಳು ಮತ್ತು ಬೆಟ್ಟಗುಡ್ಡಗಳಲ್ಲಿ ಬಲವಾದ ನೀರಿನ ಪ್ರವಾಹಗಳು ಹರಿಯುತ್ತವೆ, ಇದು ನಂತರ ಮತ್ತಷ್ಟು ಭೂಕುಸಿತಗಳಿಗೆ ಕಾರಣವಾಗಬಹುದು ಎಂದು ಅಹ್ಮದ್ ಜಾಹಿದ್ ಹೇಳಿದರು, ಅಂತಹ ಎಲ್ಲಾ ಕ್ಯಾಂಪಿಂಗ್ ಸ್ಥಳಗಳನ್ನು ಖಾಲಿ ಮಾಡುವಂತೆ ಸಲಹೆ ನೀಡಿದರು.
ಮುಂಜಾಗೃತಾ ಕ್ರಮವಾಗಿ ಮುಂದಿನ ಸೂಚನೆ ಬರುವವರೆಗೆ ಈ ಪ್ರದೇಶದ ಎಲ್ಲಾ ಶಿಬಿರಗಳು ಮತ್ತು ಮನರಂಜನಾ ಸ್ಥಳಗಳನ್ನು ಮುಚ್ಚಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಸೈಫುದ್ದೀನ್ ಹೇಳಿದರು.
ಏತನ್ಮಧ್ಯೆ, ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಶುಕ್ರವಾರ ಸಂಜೆ ಇಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ರಕ್ಷಣಾ ಸಿಬ್ಬಂದಿಯನ್ನು ಭೇಟಿ ಮಾಡಿದ ನಂತರ ಸಂತ್ರಸ್ತರಿಗೆ ಆರ್ಥಿಕ ಸಹಾಯವನ್ನು ಘೋಷಿಸಿದರು.