ಸಿಯೋಲ್: ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್-ಉನ್ ಅವರ ಮಗಳು ಮತ್ತೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈಕೆ ಕಿಮ್ ಉತ್ತರಾಧಿಕಾರಿ ಎಂದು ಘೋಷಿಸುವ ಸಾಧ್ಯತೆ ಇದೆ ಎಂದು ಚಿಂತಕರ ಚಾವಡಿ ಹೇಳಿದೆ.
ಸಿಯೋಲ್ನಲ್ಲಿರುವ ಕೊರಿಯಾ ಇನ್ಸ್ಟಿಟ್ಯೂಟ್ ಫಾರ್ ನ್ಯಾಶನಲ್ ಯೂನಿಫಿಕೇಶನ್ನ ಮುಖ್ಯಸ್ಥ ಕೊಹ್ ಯು-ಹ್ವಾನ್ ಅವರ ಹೇಳಿಕೆಗಳನ್ನು ದಕ್ಷಿಣ ಕೊರಿಯಾದ ಬೇಹುಗಾರಿಕಾ ಸಂಸ್ಥೆ ವಿಶ್ಲೇಷಿಸಿದ್ದು, ಆಕೆ ಉತ್ತರ ಕೊರಿಯಾದ ಉತ್ತರಾಧಿಕಾರಿಯಾಗಬಹುದೆಂದು ಹೇಳಿದೆ.
ದಕ್ಷಿಣ ಕೊರಿಯಾ ರಾಷ್ಟ್ರೀಯ ಗುಪ್ತಚರ ಸೇವೆಯು ಕಿಮ್ಗೆ ಮೂವರು ಮಕ್ಕಳಿದ್ದಾರೆ ಎಂದು ಹೇಳಿದೆ. ಅಲ್ಲದೆ ಮೊದಲನೆಯವನು ಪುತ್ರ ಎಂದು ಹೇಳಿದೆ. ಆದರೆ ಮೂರನೆ ಮಗು ಹೆಣ್ಣೋ ಗಂಡೋ ಎಂಬುದು ದೃಢಗೊಂಡಿಲ್ಲ ಎಂದಿದೆ.
ಪ್ರಸ್ತುತ ಕಿಮ್ ಉತ್ತರಾಧಿಕಾರಿಯಾಗಿ ಜು-ಎ (ಪುತ್ರಿ) ಯನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಈಕೆಗೆ ಈಗ 10 ವರ್ಷ ಎಂದು ನಂಬಲಾಗಿದೆ. ಕಳೆದ ವರ್ಷ ನವೆಂಬರ್ನಲ್ಲಿ ಮೊದಲ ಬಾರಿ ಈಕೆ ತಂದೆಯೊಂದಿಗೆ ಖಂಡಾಂತರ ಕ್ಷಿಪಣಿ ಪರೀಕ್ಷೆ ವೇಳೆ ಹಾಜರಾಗಿದ್ದರು. ಉತ್ತರ ಕೊರಿಯಾದಲ್ಲಿ ಪಿತೃಪ್ರಭುತ್ವ ಪದ್ಧತಿ ಅಸ್ತಿತ್ವದಲ್ಲಿದೆ. ಆದರೆ ಹಿರಿಯ ಮಗನ ಅಸ್ತಿತ್ವದ ಬಗ್ಗೆ ಗೊಂದಲವಿರುವ ಕಾರಣ ಈಕೆ ಉತ್ತರಾಧಿಕಾರಿಯಾಗಲಿದ್ದಾರೆ ಎಂದು ಚಿಂತಕರು ಹೇಳಿದ್ದಾರೆ.