ಮನೆಯಲ್ಲೇ ಮಾಡಿ ನೋಡಿ ಕ್ಯಾಬೇಜ್ ಟಿಕ್ಕಿ

ಮನೆಯಲ್ಲೇ ಮಾಡಿ ನೋಡಿ ಕ್ಯಾಬೇಜ್ ಟಿಕ್ಕಿ

LK   ¦    Mar 19, 2020 08:02:17 PM (IST)
ಮನೆಯಲ್ಲೇ ಮಾಡಿ ನೋಡಿ ಕ್ಯಾಬೇಜ್ ಟಿಕ್ಕಿ

ಕೊರೋನಾ ಭೀತಿಯಿಂದ ಮನೆಯಿಂದ ಹೊರಗೆ ಹೋಗಿ ಹೋಟೆಲ್ ಗಳಲ್ಲಿ ಊಟ ಮಾಡುವುದು ಈಗ ದೂರದ ಮಾತು. ಇಂತಹ ಸಂದರ್ಭದಲ್ಲಿ ಮನೆಯಲ್ಲೇ ಸಾಮಾನ್ಯವಾಗಿ ಟಿಕ್ಕಿಯನ್ನು ಹೆಚ್ಚಾಗಿ ನಾನ್ ವೆಜ್‍ನಿಂದಲೇ ತಯಾರು ಮಾಡುತ್ತಾರೆ. ಆದರೆ ವೆಜ್‍ನಿಂದ ಮಾಡಿದ ಟಿಕ್ಕಿಯೂ ರುಚಿಯಾಗಿರುತ್ತದೆ. ಅದರಲ್ಲೂ ಕ್ಯಾಬೇಜ್ ನಿಂದ ಮಾಡುವ ಟಿಕ್ಕಿಯನ್ನು ಕಾಫಿ ಜತೆಗೆ ಸೇವಿಸಿ ಮಜಾ ತೆಗೆದುಕೊಳ್ಳಬಹುದು. ಕ್ಯಾಬೇಜ್ ಟಿಕ್ಕಿಯನ್ನು ಮಾಡುವುದು ಹೇಗೆ ಮತ್ತು ಬೇಕಾಗುವ ಪದಾರ್ಥಗಳೇನು ಎಂಬುದರ ಮಾಹಿತಿ ಇಲ್ಲಿದೆ.

 

ಕ್ಯಾಬೇಜ್ ಟಿಕ್ಕಿ ತಯಾರಿಸಲು ಬೇಕಾಗುವ ಪದಾರ್ಥಗಳು

 ಎಲೆಕೋಸು- ಒಂದು ಬಟ್ಟಲು(ಚಿಕ್ಕದಾಗಿ ತುರಿದದ್ದು)

 ಅಕ್ಕಿ- ಒಂದು ಬಟ್ಟಲು

 ತೊಗರಿಬೇಳೆ- ಅರ್ಧ ಬಟ್ಟಲು

 ಅಕ್ಕಿ ಹಿಟ್ಟು- ಸ್ವಲ್ಪ

 ಈರುಳ್ಳಿ- ಅರ್ಧ ಬಟ್ಟಲು(ಕತ್ತರಿಸಿದ್ದು)

 ಕಾರದಪುಡಿ- ಎರಡು ಟೀ ಚಮಚ

 ಅರಸಿನಪುಡಿ- ಒಂದು ಚಿಟಿಕೆ

 ದನಿಯಾ- ಸ್ವಲ್ಪ

 ಬೆಲ್ಲ- ಸ್ವಲ್ಪ

 ಹುಣಸೆ ರಸ- ಮೂರ್ನಾಲ್ಕು ಚಮಚ

 ತೆಂಗಿನಕಾಯಿ ತುರಿ- ಅರ್ಧ ಬಟ್ಟಲು

 ಉಪ್ಪು- ರುಚಿಗೆ ತಕ್ಕಷ್ಟು

 ಎಣ್ಣೆ- ಕರಿಯಲು ಸಾಕಾಗುವಷ್ಟು

 

ಕ್ಯಾಬೇಜ್ ಟಿಕ್ಕಿ ಮಾಡುವ ವಿಧಾನ ಹೀಗಿದೆ..

 ಮೊದಲಿಗೆ ಅಕ್ಕಿ, ತೊಗರಿಬೇಳೆಯನ್ನು ನೆನೆಸಿಟ್ಟುಕೊಳ್ಳಬೇಕು. ಒಂದು ಪಾತ್ರೆಗೆ ತೆಂಗಿನತುರಿ,  ದನಿಯಾ, ಅರಸಿನಪುಡಿ, ಕಾರದ ಪುಡಿ, ಹುಣಸೆ ರಸ ಮೊದಲಾದವುಗಳನ್ನು ಹಾಕಿ ತಿರುವಿ ಮಸಾಲೆ ಮಾಡಿಕೊಳ್ಳಬೇಕು. ಅದಕ್ಕೆ ತುರಿದ ಎಲೆಕೋಸು, ಪಡಿಮಾಡಿದ ಬೆಲ್ಲ,  ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ಹೊತ್ತು ಬಿಡಬೇಕು.

ಇನ್ನೊಂದೆಡೆ ನೆನೆಸಿಟ್ಟ ಅಕ್ಕಿ ಮತ್ತು ತೊಗರಿಬೇಳೆಯನ್ನು ಮಿಕ್ಸಿಯಲ್ಲಿ ಹಾಕಿ ಗಟ್ಟಿಯಾಗಿ ರುಬ್ಬಿ ಅದನ್ನು  ಮೊದಲು ಮಾಡಿಟ್ಟ ಮಸಾಲೆಗೆ ಸೇರಿಸಬೇಕು. ಈ ವೇಳೆ ಸ್ವಲ್ಪ ಅಕ್ಕಿ ಹಿಟ್ಟು ಹಾಕಬೇಕು. ಬಳಿಕ ಎಲ್ಲವನ್ನು ಸೇರಿಸಿ ಚೆನ್ನಾಗಿ ಕಲೆಸಬೇಕು. ಆ ನಂತರ ಟಿಕ್ಕಿ ತರಹ ತಟ್ಟಿಕೊಂಡು ಅದನ್ನು ಕಾದ ಹಂಚಿನಲ್ಲಿ ಎಣ್ಣೆ ಸವರಿ ಕಾಯಿಸಬೇಕು. ಎರಡು ಕಡೆಯೂ ಹೊಂಬಣ್ಣ ತರುವ ತನಕ ಚೆನ್ನಾಗಿ ಬೇಯಿಸಿ ತೆಗೆದರೆ ಕ್ಯಾಬೇಜ್ ಟಿಕ್ಕಿ ರೆಡಿಯಾದಂತೆಯೇ.