ಕಥನ‌ ಕಾವ್ಯದ ರಾಘವ

ಕಥನ‌ ಕಾವ್ಯದ ರಾಘವ

Deevith SK Peradi   ¦    Mar 13, 2021 12:43:32 PM (IST)
ಕಥನ‌ ಕಾವ್ಯದ ರಾಘವ

ಪೂರ್ವಂ ರಾಮ ತಪೋವನಾಭಿಗಮನಂ ಹತ್ವಾ ಮೃಗಃ ಕಾಂಚನಂ

ವೈದೇಹೀಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ
ವಾಲೀ ನಿಗ್ರಹಣಂ ಸಮುದ್ರ ತರಣಂ ಲಂಕಾಪುರೀದಾಹನಂ
ಪಶ್ಚಾದ್ರಾವಣ ಕುಂಭ ಕರ್ಣಹನನಂ ಏತದ್ದಿ ರಾಮಾಯಣಂ

ರಾಮನ ತರಳದ್ವಯರಿಂದ ನಡೆದ ಶ್ರೀ ಮದ್ರಾಮಾಯಣ ಕಾವ್ಯ ಗಾಯನದ ಶುಭ ಘಳಿಗೆಯದು‌. ಕಾವ್ಯನಾಯಕನ ಮುಂದೆ ಕಾವ್ಯ ಮಂದಾಕಿನಿ ಕಥನ ಭಾಗ ಸಂಗಮವಾದ ರಮ್ಯ ಕ್ಷಣವದು. ಶಿಷ್ಯಕಾಮೇಷ್ಟಿಯಿಂದ ಶಿಷ್ಯರನ್ನು ಪಡೆದ ವಾಲ್ಮೀಕಿ ಪ್ರತಿಭಾವಂತ ಮಕ್ಕಳನ್ನು ದಾಶರಥಿಗೆ ಪರಿಚಯಿಸುವ ಸಂದರ್ಭವದು. ಒಟ್ಟಿನಲ್ಲಿ ಕಾವ್ಯಗಂಗೆ ರಾಮನ ಪದತಳವನ್ನು ಸೇರಲು ಸಜ್ಜಾಗಿರುವ ದೃಶ್ಯವದು.

ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾನಿಷಾದ ಪ್ರಸಂಗದ ಅಂತಿಮ ಭಾಗದಲ್ಲಿ ಬರುವ ಶ್ರೀಮದ್ರಾಮಾಯಣದ ಕಾವ್ಯ ಪಠಣ ಕವಿಯ ಕವಿತಾ ರಚನೆಯ ಸೃಜನಶೀಲತೆಯನ್ನು ಸ್ಫುರಿಸುತ್ತದೆ. ಶಾರ್ದೂಲ ವಿಕ್ರೀಡಿತ ವೃತ್ತದಲ್ಲಿ ಬರೆದ ರಚನೆ ಪೂರ್ಣ ರಾಮಾಯಣವನ್ನು ದೃಶ್ಯೀಕರಿಸುತ್ತದೆ. ಅವಕುಂಠನ ಧರಿಸಿದ ಸೀತೆಯ ಮುಂದೆ ನಿಂತಿದ್ದ ಕುಶಲವರನ್ನು ವಾಲ್ಮೀಕಿಯು ರಾಮಚಂದ್ರನಿಗೆ ಪರಿಚಯಿಸುವ ಮೊದಲು ವ್ಯಕ್ತವಾಗುವ ಈ ಕಾವ್ಯ ಗಾಯನ ಮಾನಿಷಾದ ಪ್ರಸಂಗದ ಕೇಂದ್ರ ಭಾಗ.

" ಮುನಿವರನೆ ತವಪಾದ ವನಜ ದರ್ಶನದಿಂದ ಜನುಮ ಸಾರ್ಥಕವಾದುದೆನಗೆ " ಎಂದು ರಾಘವ ರಾಮನ ಬಳಿಯಲ್ಲಿ ತಿಳಿಸಿ ಆಸನಸ್ಥರಾಗಿ ಯಥೋಪಚಾರಗಳನ್ನು ಸ್ವೀಕರಿಸಬೇಕೆಂದು ಹೇಳುತ್ತಾನೆ. " ಘನ‌ಮಹೀಮ‌ ನಿನ್ನ ವಚನಾಮೃತವನೀಂಟಲೆ ಜನತೆ ಕಾದಿಹುದು" ಎಂದು ವಾಲ್ಮೀಕಿಯ ಉಪದೇಶಾಮೃತವನ್ನು ಕೇಳವ ಉತ್ಸುಕತೆಯನ್ನು ವ್ಯಕ್ತಪಡಿಸಿದ ರಾಮಗೆ ವಾಲ್ಮೀಕಿಯು ಕೃಪೆದೋರುತ್ತಾನೆ. ತನ್ನ ಜೊತೆಗೆ ಬಂದಿರುವ ಬಾಲಕರನ್ನು ರಾಮನಿಗೆ ಪರಿಚಯಿಸುತ್ತಾನೆ. ತನ್ನ ಕರಕಮಲ‌ಸಂಜಾತರದಾದ ಶಿಷ್ಯರ ಮೂಲಕ ತಾನೇ ರಚಿಸಿದ ಕಥನ ಕಾವ್ಯವೊಂದನ್ನು ವ್ಯಕ್ತ ಪಡಿಸಲು ದಾಶರಥಿಯಲ್ಲಿ ಒಪ್ಪಿಗೆ ಕೇಳಿದ ವಾಲ್ಮೀಕಿ ಹೊಸ ಅನುಭವ ಸಾಧ್ಯತೆಗೆ ವೇದಿಕೆ ನಿರ್ಮಿಸುತ್ತಾನೆ.

ಶ್ರುತಿ, ಲಯ, ಛಂದೋಬದ್ಧವಾಗಿ ಹಾಡಿದ ಕುಶ-ಲವರ ಗಾಯನವನ್ನು ಕೇಳಿದ ಶ್ರೀರಾಮ ಪ್ರಮೋದ‌ಮುದಿತ ಹೃದಯದವನಾಗಿ ವಾಲ್ಮೀಕಿ‌ ಮಹರ್ಷಿಯನ್ನು ಅಭಿನಂದಿಸುತ್ತಾನೆ. ಕಲಾವಿದರನ್ನು ಗೌರವಿಸುವ ನಿಟ್ಟಿನಲ್ಲಿ ಧನಕನಕಾದಿ ಸಂಪದವನ್ನು ನೀಯುವ ಬಗೆಯ ಕುರಿತಾಗಿ ವಾಲ್ಮಿಕಿಯಲ್ಲಿ ತನ್ನ ಹರುಷವನ್ನು ವ್ಯಕ್ತಪಡಿಸಿದಾಗ ಶ್ರೀರಾಮನ ಭಾವ ವೈಪರೀತ್ಯವನ್ನು ಗಮನಿಸಿದ ವಾಲ್ಮೀಕಿ " ಈ ನನ್ನ ಶಿಷ್ಯದ್ವಯರಿಗೆ ಅವರ ಕಾವ್ಯ ಗಾಯನಕ್ಕೆ‌ ಪ್ರೀತ್ಯರ್ಥವಾಗಿ ನೀನು ನಿನ್ನ ಸಾಕೇತವನ್ನು ಪಾರಿತೋಷಕವಾಗಿ ಕೊಟ್ಟರೂ ಅದನ್ನು ಪರಿಗ್ರಹಿಸುವ ಯೋಗ್ಯತೆ ಅವರಲ್ಲಿದೆ" ಎಂದು ನುಡಿಯುತ್ತಾನೆ.

ಶ್ರೀರಾಮನ ಬಗೆಗಿನ ಕಾವ್ಯವನ್ನು ರಾಘವನ ಮಕ್ಕಳ ಮೂಲಕವೇ ವ್ಯಕ್ತಪಡಿಸಿದ ವಾಲ್ಮೀಕಿಯು ವಿಧಿವಿಲಾಸದ ನಾಟಕದ‌ ಸೂತ್ರಧಾರನೇ ಸರಿ. ಮಾತೆ ಜಾನಕಿಗೆ ರಕ್ಷೆಯನ್ನಿತ್ತು, ರಘುಕುಲದ ತರಳದ್ವರಿಗೆ ವಿದ್ಯೆಯನ್ನಿತ್ತು ಕೆರೆಯ ನೀರನ್ನು ಮರಳಿ ಕೆರೆಗೆ ಚೆಲ್ಲಲು ಹೊರಟ ಬಗೆ ಕಾವ್ಯಲೋಕದ ಸೃಜನಶೀಲತೆಯಲ್ಲದೆ ಮತ್ತಿನ್ನೇನು? ಸಾವಿರದ ಬಾಂಧವ್ಯವನ್ನು ಬೆಸೆಯುವಲ್ಲಿ ವಾಲ್ಮೀಕಿಯು ರಾಮಾಯಣದ ಬಂಧವನ್ನು ಸೃಜಿಸಿ ಸೀತಾಯಣದ ಸ್ಫುರಣೆಗೆ ಸಾಕ್ಷಿಯಾಗಿ ನಿಲ್ಲತ್ತಾನೆ. ರಾಮಾಯಣದ ಕಥನ ಕಾವ್ಯವನ್ನು ರಾಘವನ‌ ಪಾದಾಂಬುಜಕ್ಕೆ ಸಮರ್ಪಿಸಿ ರಘುವಂಶದ ಉದ್ಧರಣಕ್ಕೆ ಹಾದಿ ತೋರುತ್ತಾನೆ.