ಇತ್ತ ಬಾ ಶತ್ರುಘ್ನ.....

ಇತ್ತ ಬಾ ಶತ್ರುಘ್ನ.....

Deevith S K Peradi   ¦    Dec 26, 2020 09:42:56 AM (IST)
ಇತ್ತ ಬಾ ಶತ್ರುಘ್ನ.....

ಹರಹರಾ ರಘುವಂಶದೀ ವಧು |
ತಿರುಕರಂದದಿ ತೃಣದ ಶಯ್ಯೆಯೊ |
ಳೊರಗಿಹಳು ವಿಧಿ ಲೀಲೆಯೆನ್ನೀ | ಗೊರೆಯಲೇನು ||

ಹೌದು! ಆ ದಾರುಣ ದೃಶ್ಯ ಶತ್ರುಘ್ನನನ್ನು ಘಾಸಿಗೊಳಿಸಿತು. ಅಯೋಧ್ಯೆಯ ಸುವರ್ಣ ಕಲಶ ಸೌಭಾಗ್ಯವತಿ ಸೀತಾದೇವಿ ವಾಲ್ಮೀಕಿಯ ಆಶ್ರಮದಲ್ಲಿ ತೃಣದ ಶಯ್ಯೆಯಲ್ಲಿ ನವಜಾತ ಶಿಶುಗಳೊಂದಿಗೆ ಮಲಗಿರುವುದನ್ನು ನೋಡಿದ ಸೌಮಿತ್ರಿ ಮಂಕಾಗಿ ಹೋದ. ಹಂಸತೂಲಿಕಾ ತಲ್ಪದಲ್ಲಿ ಮಲಗಿ ಹೊಂದೊಟ್ಟಿಲಲ್ಲಿ ಕಂದಮ್ಮಗಳನ್ನು ತೂಗಬೇಕಾದ ವೈದೇಹಿ ಹುಲ್ಲ ಹಸೆಯಲ್ಲಿ ಮಲಗಿ ಹೆರಿಗೆಯ ನೋವು- ದಣಿವುಗಳನ್ನು ಕಳೆಯಬೇಕಾದ ವಿಧಿಯಾಟದ ಬಗೆಗೆ ಶತ್ರುಘ್ನ ಮಮ್ಮಲ ಮರುಗತೊಡಗಿದ. ವಿಧಿಯ ಅಣಕಿಸುವ ಬಗೆಗೆ ಶತ್ರುಘ್ನ ಏನು ತಾನೆ ಮಾಡಿಯಾನು?

ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾನಿಷಾದ ಪ್ರಸಂಗದ ಶತ್ರುಘ್ನನ ಪಾತ್ರ ಸವಾಲುಗಳನ್ನು ಸ್ವೀಕರಿಸಬೇಕಾದ ಪಾತ್ರ. ದುರುಳ ಲವಣಾಸುರನ ವಧೆಗಾಗಿ ಪಾಳಯ ಸಮೇತನಾಗಿ ಬಂದ ಶತ್ರುಘ್ನ ವಾಲ್ಮೀಕಿಯಾಶ್ರಮದಲ್ಲಿ ರಾತ್ರಿಕಳೆದು ಮುಂದುವರಿಯಲು ನಿರ್ಧರಿಸುತ್ತಾನೆ. ದಿನಪ ತೇಜದ ಶಿಶುಗಳನ್ನು ಹೆತ್ತ ಜನಕಜೆಯ ಮುಂದೆ ಒಣ ಕುಶದ ತಲ್ಪದಲ್ಲಿ ಮಲಗಿದ ತನಯರಿಗೆ ವಾಲ್ಮೀಕಿ ಕುಶಲವರೆಂದು ಹೆಸರಿಡುತ್ತಾನೆ. ರಾತ್ರಿ ಕಳೆದ ಶತ್ರುಘ್ನ ಮರುದಿವಸ ಹೊರಡಲು ಮುಂದಾದಾಗ ಕೌತುಕದಿಂದ "ಹಡೆದಿಹುದಾರು ಯಮಳರ ಇರುಳೊಳೆಂದು" ಕೇಳಿದಾಗ ವಾಲ್ಮೀಕಿ ಮನೆಯ ತಡಿಕೆಯ ಸರಿಸಿ ದಿನ ಕುಲಾಧಿಪನರಸಿಯಿರುವುದನ್ನು ತೋರಿದಾಗ ಶತ್ರುಘ್ನ ಆಘಾತ ಹೊಂದಿ ಕುಸಿದು ಬೀಳುತ್ತಾನೆ.

ಕಲ್ಲ ವಿಗ್ರಹದಂತೆ ಮಿಸುಕದೆ |
ಸೊಲ್ಲಡಗಿ ಸೌಮಿತ್ರಿ ಕಂಡನು |
ಚೆಲ್ವ ಬಾಲಕರೊಡನೆ ಮಲಗಿರೆ | ಪುಲ್ಲ ನಯನೆ ||

ಕಲ್ಲಾಗಿ ಹೋದ ಮೈದುನನ ಮೊಗವನ್ನು ನೋಡಿದ ಸೀತೆಯ ಮನದಿ ಮರುಕವು ಮೂಡಿ ಶತ್ರುಘ್ನನನ್ನು ಮಾತನಾಡಿಸಲು ಮುಂದಾಗುತ್ತಾಳೆ. "ಇತ್ತ ಬಾ ಶತ್ರುಘ್ನ, ಸ್ವಸ್ಥವೇ ಪುರದಲ್ಲಿ? ಪೃಥ್ವಿಪತಿ ಸಂತೋಷ ಚಿತ್ತದಿಂದಿಹನೆ?" ಎಂದು ರಾಜಾರಾಮನ ಸುಸ್ಥಿತಿಯ ಬಗ್ಗೆ ವಿಚಾರಿಸಿದ ವೈದೇಹಿ "ಮಾತೆಯರು ತಂಗಿಯರು ಖ್ಯಾತ ಲಕ್ಷಣ ಭರತ ಸಾತಿಶಯದಲ್ಲಿಹರೆ? " ಎಂದು ವಿಚಾರಿಸುತ್ತಾಳೆ.

"ಜನನಿ ನೀನಿಲ್ಲದೆಡೆ ಎನಿತು ಸಂಪದವಿರಲು ಮನಕೆ ಮುದವಿಹುದೆ? " ಎಂದು ಜಾನಕಿಯ ಮಾತಿಗೆ ಪ್ರತಿಯಾಡಿದ ಶತ್ರುಘ್ನ ಅಯೋಧ್ಯೆಯ ಯಾಂತ್ರಿಕ ಮನೋಸ್ಥಿಯನ್ನು ಬಣ್ಣಿಸುತ್ತಾನೆ." ಕಿರಣವಿಲ್ಲದ ಸೂರ್ಯ, ಹರಣವಿಲ್ಲದ ಕಾಯವಿರಲೇನು? ನೀನಿಲ್ಲದಿರುವ ಪುರವಂತೆ" ಎಂದು ನಿಸ್ತೇಜವಾಗಿರುವ ಪುರದ ಮನೆ- ಮನದ ಬೇಗೆಯ ಬಗೆಯನ್ನು ಶತ್ರುಘ್ನ ಮಾತೆ ಜಾನಕಿಗೆ ತಿಳಿಯಪಡಿಸುತ್ತಾನೆ.

ಅನಿವಾರ್ಯವಾದ ವಿಯೋಗವನ್ನು ಅರ್ಥವಿಸಿಕೊಂಡು ಸಹಜ ಸ್ಥಿತಿಗೆ ಬಂದಿರುವ ಜನಕಜೆ ಶತ್ರುಘ್ನನನ್ನು ಸಮಾಧಾನಿಸಲು ಮುಂದಾಗುತ್ತಾಳೆ. " ಕಂದ ನೀನೀ ತೆರದಿ ನೊಂದು ಕೊಂಡಾಡದಿರು. ಬಂದುದನ್ನನುಭವಿಸೆ ಚಂದ ಸಕಲರಿಗೆ" ಎಂದು ಉದ್ವಿಗ್ನನಾದ ರಾಮಾನುಜನ ಮುಂದೆ ಸಂಯಮವನ್ನು ವ್ಯಕ್ತಪಡಿಸುತ್ತಾಳೆ. "ಕರುಣಾಳು ರಾಘವಗೆ ಕರಿ ಕಳಂಕವ ತಂದು ಪುರದೊಳಿರ್ಪುದಕ್ಕಿಂತ ಹೊರಗುಚಿತವಲ್ವೆ" ಎಂದು ನುಡಿದ ಸೀತೆಗೆ ಖೇದ ಮಾನಸನಾದ ಶತ್ರುಘ್ನ ತರಳದ್ವಯರ ಶುಭ ಜನನ ಹಾಗೂ ಸೀತೆಯ ಇರವನ್ನು ಶ್ರೀರಾಮನಿಗೆ ತಿಳಿಸುವುದಾಗಿ ಮುಂದುವರಿದಾಗ ಜಾನಕಿ ತಡೆಯುತ್ತಾಳೆ.

ಇದ ಮರೆತು ನೀನೀಗ ಮುದದೊಳಿರು ಮುಂದಾದ | ರಿದನು ನಿನ್ನಣ್ಣಂಗೆ ಪೇಳದಿರು ನಿನಗೆನ್ನ |
ಉದರದಲಿ ಜನಿಸಿರ್ಪ ಎಳೆ ಶಿಶುಗಳಾಣೆ ರಾಘವನಾಣೆ ಎಂದೆನಲ್ಕೆ |

ರಾಘವನ ಆಶಯಕ್ಕೆ ವಿರುದ್ಧವಾಗಿ ನಡೆಯತೊಡಗಿದ ಶತ್ರುಘ್ನನಿಗೆ ಜಾನಕಿ ವಾಸ್ತವವನ್ನು ಅರ್ಥೈಸಲು ಮುಂದಾಗುತ್ತಾಳೆ. ವಾಲ್ಮೀಕಿಯ ಆಶ್ರಮದಲ್ಲಿ ತಾನು‌ಕಂಡ ವಸ್ತುಸ್ಥಿತಿಯನ್ನು ರಾಮನಿಗೆ ತಿಳಿಸುವುದಾಗಿ ಶತ್ರುಘ್ನ ಹಠ ಹಿಡಿಯುತ್ತಾನೆ. ಭಾವಪರವಶನಾಗಿ‌ ಮಕ್ಕಳಂತಾಡತೊಡಗಿದ ಶತ್ರುಘ್ನನಿಗೆ "ಶ್ರೀರಾಮನ ಮೇಲಾಣೆ" ಎಂದು ನುಡಿದ ಜಾನಕಿ ಶತ್ರುಘ್ನನನ್ನು ವಿಪಾಶ ಬಂಧನಕ್ಕೆ ಸಿಲುಕಿಸುತ್ತಾಳೆ. ಎಷ್ಟದರೂ ಆಕೆ ಭೂ ಸುತೆಯಲ್ಲವೇ..?