ಸೈಕಾಲಜಿಸ್ಟ್ ಮತ್ತು ಸೈಕಿಯಾಟ್ರಿಸ್ಟ್ ಇವರ ನಡುವಿನ ವ್ಯತ್ಯಾಸವೇನು ?

ಸೈಕಾಲಜಿಸ್ಟ್ ಮತ್ತು ಸೈಕಿಯಾಟ್ರಿಸ್ಟ್ ಇವರ ನಡುವಿನ ವ್ಯತ್ಯಾಸವೇನು ?

Oct 11, 2020 09:00:00 AM (IST)
ಸೈಕಾಲಜಿಸ್ಟ್ ಮತ್ತು ಸೈಕಿಯಾಟ್ರಿಸ್ಟ್ ಇವರ ನಡುವಿನ ವ್ಯತ್ಯಾಸವೇನು ?

ಸೈಕಿಯಾಟ್ರಿಸ್ಟ್ ಅಂದರೆ ಕನ್ನಡದಲ್ಲಿ ಮನೋವೈದ್ಯರೆನ್ನಬಹುದು. ಅವರು ವೈದ್ಯಕೀಯ ಪದ್ಧತಿಯಲ್ಲಿ ಪದವಿಯನ್ನು ಮುಗಿಸಿ, ತದನಂತರ ಸೈಕಿಯಾಟ್ರಿ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದವರಾಗಿರುತ್ತಾರೆ. ಇವರುಗಳು ಮಾನಸಿಕ ಅಸ್ವಸ್ಥತೆಗೆ ಔಷಧಿಯನ್ನು ಕೊಡಬಹುದು.

ಸೈಕಾಲಜಿಸ್ಟ್ ಅಂದರೆ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದವರಾಗಿರುತ್ತಾರೆ. ಆಮೇಲೆ ಪಿ ಎಚ್ ಡಿ ಕೂಡಾ ಮಾಡಿರಬಹುದು. ಇವರುಗಳು ಮಾನಸಿಕ ಅಸ್ವಸ್ಥತೆಯನ್ನು ಶುಶ್ರೂಷೆ ಮಾಡಲು ಯಾವುದೇ ಔಷಧಿಗಳನ್ನು ಕೊಡುವುದಿಲ್ಲ. ಬದಲಾಗಿ ಮನೋ ಚಿಕಿತ್ಸೆಯನ್ನು ಕೌನ್ಸಿಲಿಂಗ್ ಅಥವಾ ಇತರೆ ವಿಧಾನಗಳ ಮೂಲಕ ನಡೆಸುತ್ತಾರೆ. ಒಬ್ಬ ಸೈಕಾಲಜಿಸ್ಟ್ ನ ಮುಖ್ಯ ಕೆಲಸವೇ ಮಾನಸಿಕ ಅಸ್ವಸ್ಥತೆಯ ಮೂಲಕಾರಣವನ್ನು ಹುಡುಕುವುದು; ಆಮೇಲೆ ಅದಕ್ಕೆ ಅದನ್ನು ಪರಿಹರಿಸಿಕೊಳ್ಳಲು ಬೇಕಾದ ದಾರಿಗಳನ್ನು ತೋರಿಸಿಕೊಡುವುದು.

ಹಾಗಿದ್ದರೆ ಮೊದಲಿಗೆ ಯಾರನ್ನು ಭೇಟಿ ಮಾಡಬೇಕು?

ಸಾಧಾರಣವಾಗಿ ಮಾನಸಿಕ ಆರೋಗ್ಯದ ಆಸ್ಪತ್ರೆಗಳಲ್ಲಿ ಸೈಕಿಯಾಟ್ರಿಸ್ಟ್ ಗಳು ರೋಗಿಗಳನ್ನು ಮೊದಲು ಪರೀಕ್ಷಿಸುತ್ತಾರೆ. ಆಮೇಲೆ ಅಗತ್ಯವಿದ್ದಲ್ಲಿ ಸೈಕಾಲಜಿಸ್ಟ್ ಗಳ ಬಳಿ ಕಳುಹಿಸುತ್ತಾರೆ. ಆದರೆ ಕೆಲವೊಂದು ಬಾರಿ ಕೇವಲ ಔಷಧಿಯನ್ನು ಕೊಟ್ಟು ಮನೋ ಚಿಕಿತ್ಸೆಯನ್ನು ಮಾಡಿಸದೆ ಇರುವಂತಹ ನಿರ್ಧಾರವನ್ನೂ ತೆಗೆದುಕೊಳ್ಳಬಹುದು.

ಹಾಗಾಗಿ ಯಾವುದೇ ರೀತಿಯಾದಂತಹ ಮಾನಸಿಕ ಅಸ್ವಸ್ಥತೆ ಇದ್ದಲ್ಲಿ ಮೊದಲಿಗೆ ಸೈಕಾಲಜಿಸ್ಟ್ ಗಳನ್ನು ಭೇಟಿ ಮಾಡಿ. ತದನಂತರ ಅಗತ್ಯವಿದ್ದರೆ ಮಾತ್ರ ಸೈಕಿಯಾಟ್ರಿಸ್ಟ್ ಗಳನ್ನು ಭೇಟಿ ಮಾಡಿ ಔಷಧಿ ತೆಗೆದುಕೊಳ್ಳುವುದು ಉತ್ತಮ.

ಈ ತರ್ಕದ ಹಿಂದೆ ಇರುವ ಬಹುಮುಖ್ಯ ಕಾರಣ ಎಂದರೆ ಅನೇಕ ರೀತಿಯ ಮಾನಸಿಕ ಅಸ್ವಸ್ಥತೆ ಗಳಿಗೆ ಔಷಧಿ ಇಲ್ಲದೆ ಮನೋಚಿಕಿತ್ಸೆ ಸಾಧ್ಯವಿದೆ ಮತ್ತು ಮೂಲಕಾರಣವನ್ನು ಹುಡುಕುವ ಮೂಲಕ ಯಾವಾಗ ನಾವು ಮಾನಸಿಕ ಅಸ್ವಸ್ಥತೆಯನ್ನು ಶುಶ್ರೂಷೆ ಮಾಡುತ್ತೇವೋ ಆವಾಗ ಅದರ ಪರಿಣಾಮ ದೀರ್ಘಕಾಲೀನವಾಗಿರುತ್ತದೆ.

ಕೆಲವೊಂದು ಸೈಕಿಯಾಟ್ರಿಸ್ಟ್ ಗಳು ಕೂಡ ಮನೋ ಚಿಕಿತ್ಸೆಯನ್ನು ಮಾಡಲು ಪರಿಣತಿಯನ್ನು ಹೊಂದಿರುತ್ತಾರೆ. ಅಂತಹವರು ಕೂಡಾ ಮೊದಲು ಮನೋ ಚಿಕಿತ್ಸೆಗೆ ಹೆಚ್ಚು ಆದ್ಯತೆಯನ್ನು ನೀಡುತ್ತಾರೆ.

ಇವುಗಳನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ನಾವೆಲ್ಲರೂ ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕಾದ ಇರುವಂತಹ ವಿಷಯವೇನೆಂದರೆ ಯಾವುದೇ ರೀತಿಯ ಮಾನಸಿಕ ಅಸ್ವಸ್ಥತೆ ನಮ್ಮನ್ನು ಕಾಡುತ್ತಿದ್ದರೆ ತಡಮಾಡದೆ ಮನೋವೈದ್ಯರನ್ನು ಅಥವಾ ಮನಶಾಸ್ತ್ರಜ್ಞ ರನ್ನು ಭೇಟಿ ಮಾಡುವುದಕ್ಕೆ ತಡಮಾಡಬಾರದು.

ಆರಂಭಿಕ ಹಂತದಲ್ಲೇ ಚಿಕಿತ್ಸೆ ದೊರೆತಾಗ ಪರಿಹಾರ ಸುಲಭಸಾಧ್ಯವಾಗುತ್ತದೆ. ತಡ ಮಾಡಿದಷ್ಟು ಸಮಸ್ಯೆ ಬಿಗಡಾಯಿಸಿರುವುದು ಜಾಸ್ತಿ ಮತ್ತು ಶುಶ್ರೂಷೆಗೆ ಬೇಕಾಗುವಂತಹ ಸಮಯವು ಹೆಚ್ಚಾಗುತ್ತದೆ

ಯಾವುದೇ ಕಾರಣಕ್ಕೂ ವಿಳಂಬ ಮಾಡುವುದು ಸರಿಯಲ್ಲ.

ಮಾನಸಿಕ ಆರೋಗ್ಯದ ಕುರಿತಾಗಿ ಪ್ರಶ್ನೆಗಳಿದ್ದಲ್ಲಿ ಇ-ಮೇಲ್ ಕಳುಹಿಸಿ; manosamvaada@gmail.com (ಗೌಪ್ಯತೆ ಕಾಪಾಡಲಾಗುವುದು). ಅಕ್ಷರ ದಾಮ್ಲೆ ಉತ್ತರಿಸುತ್ತಾರೆ.